×
Ad

ಗೋರಕ್ಷಕರಿಂದ ತ.ನಾಡು ಟ್ರಕ್‌ಗಳ ಮೇಲೆ ದಾಳಿ ಘಟನೆ: ನಾಲ್ವರ ಬಂಧನ

Update: 2017-06-13 22:48 IST

ಚೆನ್ನೈ,ಜೂ.13: ರಾಜಸ್ಥಾನದ ಬಾರ್ಮೆರ್ ಸಮೀಪ ಗೋವುಗಳಿಂದ ತುಂಬಿದ್ದ ತಮಿಳುನಾಡಿನ ಟ್ರಕ್‌ಗಳ ಮೇಲೆ ದಾಳಿ ನಡೆಸಿ, ಅವುಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ ಪೊಲೀಸರು ಸೋಮವಾರ ತಡರಾತ್ರಿ ನಾಲ್ವರನ್ನು ಬಂಧಿಸಿದ್ದಾರೆ. ಆದರೆ ಘಟನೆಯಿಂದ ಟ್ರಕ್‌ನಲ್ಲಿದ್ದವರು ಭಯಭೀತರಾಗಿದ್ದು, ಅವರು ರಾಜಸ್ಥಾನ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಮಾರ್ಗವಾಗಿ ವಾಪಸಾಗಲು ಹಿಂಜರಿಯುತ್ತಿದ್ದಾರೆಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.

  ಗೋರಕ್ಷಣೆ ಯೋಜನೆಯಡಿ ತಮಿಳುನಾಡು ಸರಕಾರದಿಂದ ಕಾನೂನುಬದ್ಧವಾಗಿ ಖರೀದಿಸಲಾದ ಈ ಜಾನುವಾರುಗಳನ್ನು ರಾಜಸ್ಥಾನಕ್ಕೆ ಟ್ರಕ್‌ಗಳಲ್ಲಿ ತರಲಾಗುತ್ತಿತ್ತು. ಗೋವುಗಳನ್ನು ಮಾಂಸಕ್ಕಾಗಿ ಕಳ್ಳಸಾಗಣೆ ಮಾಡಲಾಗುತ್ತಿದೆಯೆಂದು ಶಂಕಿಸಿ 50 ಮಂದಿಯ ಗುಂಪೊಂದು ರವಿವಾರ ತಡರಾತ್ರಿ ಐದು ಟ್ರಕ್‌ಗಳನ್ನು ದಾರಿಮಧ್ಯೆ ಅಡ್ಡಗಟ್ಟಿ ನಿಲ್ಲಿಸಿ, ಅವುಗಳಿಗೆ ಬೆಂಕಿ ಹಚ್ಚಿತ್ತು. ದಾಳಿ ಘಟನೆಯ ಹಿನ್ನೆಲೆಯಲ್ಲಿ ತಮಿಳುನಾಡು ಅಧಿಕಾರಿಗಳು ಟ್ರಕ್‌ನಲ್ಲಿದ್ದವರನ್ನು ಹೊಸ ಮಾರ್ಗವಾಗಿ ಬೇರೆ ವಾಹನಗಳಲ್ಲಿ ರಾಜ್ಯಕ್ಕೆ ಕರೆತರಲು ಯೋಚಿಸುತ್ತಿದ್ದಾರೆ.

  ರಾಜಸ್ಥಾನದಲ್ಲಿ ಗೋರಕ್ಷಕ ಗುಂಪುಗಳು ಗೋವುಗಳನ್ನು ಸಾಗಿಸುತ್ತಿದ್ದವರ ಮೇಲೆ ಸರಣಿ ದಾಳಿಗಳನ್ನು ನಡೆಸಿದ ಹಲವು ಘಟನೆಗಳು ಇತ್ತೀಚಿನ ತಿಂಗಳುಗಳಲ್ಲಿ ವರದಿಯಾಗಿವೆ. ಗೋವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿದೆಯೆಂದು ಆರೋಪಿಸಿ ಈ ದಾಳಿಗಳನ್ನು ನಡೆಸಲಾಗಿತ್ತು. ಈ ವರ್ಷದ ಎಪ್ರಿಲ್ 1ರಂದು ದನದ ವ್ಯಾಪಾರಿ ಪೆಹ್ಲ್ಲೂ ಖಾನ್ ಎಂಬಾತನ ಮೇಲೆ ಗೋರಕ್ಷಕರ ಗುಂಪೊಂದು ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಆತ ಎರಡು ದಿನಗಳ ನಂತರ ಅಸುನೀಗಿದ್ದ.

ದಾಳಿ ನಡೆಸಿದ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪು ಏನೂ ಮಾಡಲು ಹೇಸದೆಂಬುದು ನಮಗೆ ಖಾತರಿಯಾಯಿತು. ತಮಿಳುನಾಡು ತಲುಪುವ ಮೊದಲು ನಾವು ವಿವಿಧ ರಾಜ್ಯಗಳನ್ನು ದಾಟಬೇಕಾಗಿದೆ. ಆದರೆ ನಾವು ಅಂತಹ ಯಾವುದೇ ಅಪಾಯವನ್ನು ಎದುರುಹಾಕಿಕೊಳ್ಳಲು ಸಿದ್ಧವಿಲ್ಲ.

- ಆರ್.ಅರವಿಂದ್, ಟ್ರಕ್‌ಗಳಲ್ಲೊಂದರಲ್ಲಿ ಪ್ರಯಾಣಿಸುತ್ತಿದ್ದ ಪಶುವೈದ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News