ಉಳ್ಳಾಲ: ಕಡಲ್ಕೊರೆತ ಪ್ರದೇಶಕ್ಕೆ ಸಹಾಯಕ ಆಯುಕ್ತರ ಭೇಟಿ, ಪರಿಶೀಲನೆ
ಉಳ್ಳಾಲ, ಜೂ. 13: ಕಡಲ್ಕೊರೆತ ಪ್ರದೇಶಗಳಾದ ಉಳ್ಳಾಲ ಹಾಗೂ ಸೋಮೇಶ್ವರ ಉಚ್ಚಿಲಕ್ಕೆ ಮಂಗಳೂರಿನ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಭೇಟಿ ನೀಡಿ ಸ್ಥಳೀಯರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಕಡಲ್ಕೊರೆತ ಸಮಸ್ಯೆಯ ಕುರಿತು ಚರ್ಚಿಸಿದರು.
ಈ ಸಂದರ್ಭ ಸ್ಥಳೀಯರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿದ ಎ.ಸಿ, ಉಳ್ಳಾಲದಲ್ಲಿ ಬಾರ್ಜ್ ದುರಂತ ಸಂದರ್ಭ ವೀಕ್ಷಣೆ ಬಂದಿದ್ದು ಜಿಲ್ಲಾಧಿಕಾರಿಯೂ ಇದ್ದರು. ಈ ಭಾಗದಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ದೊರಕಿಸುವ ಬಗ್ಗೆ ಈಗಾಗಲೇ ಸಚಿವರ ಸಮ್ಮುಖದಲ್ಲಿ ಸಭೆಯೂ ನಡೆದಿದೆ. ಆದರೆ ಶಾಶ್ವತ ಪರಿಹಾರ ಎನ್ನುವುದು ದೀರ್ಘ ಯೋಜೆನೆಯಾಗಿದ್ದು, ತಕ್ಷಣಕ್ಕೆ ತಾತ್ಕಾಲಿಕ ಪರಿಹಾರ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ಸ್ಥಳಕ್ಕೆ ಬಂದಿದ್ದೇನೆ ಎಂದರು.
ಕಡಲ ತಡಿಯಲ್ಲಿ ವಾಸಿಸುವವರು ಮೀನುಗಾರಿಕೆಯನ್ನು ನಂಬಿರುವುದರಿಂದ ದೂರದ ಊರಿಗೆ ವರ್ಗಾಯಿಸುವುದು ಅಸಾಧ್ಯ. ಸ್ಥಳೀಯವಾಗಿ ಸರ್ಕಾರಿ ಜಮೀನು ಇದ್ದಲ್ಲಿ ಅದರಲ್ಲಿ ವಸತಿ ಸಂಕೀರ್ಣ ಇಲ್ಲವೇ, ಮನೆ ನಿರ್ಮಿಸಿ ಕೋಡುವ ಯೋಜನೆ ಇದೆ. ಅದುವರೆಗೆ ತಾತ್ಕಾಲಿಕ ರಕ್ಷಣೆ ನಿಟ್ಟಿನಲ್ಲಿ ಮನೆ ತೊರೆಯಲು ಮನಸ್ಸು ಇದ್ದವರು ನಗರಸಭೆ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ನೀಡಿದರೆ ನಾಲ್ಕೈದು ತಿಂಗಳ ಮಟ್ಟಿಗೆ ವ್ಯವಸ್ಥೆ ಮಾಡಲಾಗುವುದು. ಮನೆಗೆ ಮರಳುವ ವೇಳೆ ಹಾನಿಯಾಗಿದ್ದರೆ ಅದನ್ನೂ ದುರಸ್ತಿಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಸೋಮೇಶ್ವರ ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ್ ಅವರು, ಉಳ್ಳಾಲದಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿ ಸಂದರ್ಭ ಉಚ್ಚಿಲದಲ್ಲೂ ಯೋಜನೆ ರೂಪಿಸಲಾಗಿತ್ತು. ಆದರೆ ಉಳ್ಳಾಲದಲ್ಲಿ ಮಾತ್ರ ಕಾಮಗಾರಿ ನಡೆಯಿತು. ಇದುವರೆಗೆ ಈ ಭಾಗದಲ್ಲಿ ನಾಲ್ಕು ಕೋಟಿ ಖರ್ಚು ಮಾಡಿ ಕಲ್ಲು ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಇಷ್ಟು ದೊಡ್ಡ ಮೊತ್ತ ಸ್ಥಳೀಯರಿಗೆ ಪರಿಹಾರವಾಗಿ ನೀಡಿದ್ದರೆ ನಾವು ಎಲ್ಲಾದರೂ ಹೋಗಿ ಬದುಕುತ್ತಿದ್ದೆವು. ಆದರೆ ಸಂಪೂರ್ಣ ಮನೆ ಹೋದರೂ 60 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದು ದೂರಿದರು.
ಕಡಲ್ಕೊರೆತ ಜೋರಾದಾಗ ಅಧಿಕಾರಿಗಳಿಗೆ ಕರೆ ಮಾಡಿದರೆ ಸಭೆಯಲ್ಲಿದ್ದೇವೆ ಎನ್ನುತ್ತಾರೆ, ಕಡಿಮೆಯಾದಾಗ ಬರ್ತಾರೆ. ಆ ಸಂದರ್ಭ ಮರಳು ಕಲ್ಲಿನ ಮೇಲೆ ಬಿದ್ದಿರುತ್ತದೆ. ಅಧಿಕಾರಿಗಳು ಮನೆ ಸ್ಥಳಾಂತರ ಯೋಜನೆ ಮಾಡಿದರೆ ಸರ್ಕಾರದಿಂದ ಅನುಮತಿ ದೊರೆಯಬಹುದು, ಆದರೆ ನಾವು ಅಂತತ್ರರಾಗಬೇಕಾಗುತ್ತದೆ ಎಂದು ರಾಮಚಂದ್ರ ಉಚ್ಚಿಲ್ ಖೇಧ ವ್ಯಕ್ತಪಡಿಸಿದರು.
ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ಕ್ರಮ :
ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ಎ.ಸಿ.ಅವರು ಕಡಲ್ಕೊರೆತ ತಡೆ ಹಾಗೂ ಶಾಶ್ವತ ಪರಿಹಾರಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎನ್ನುವ ಬಗ್ಗೆ ಚರ್ಚಿಸಬೇಕಿದೆ, ತಾನು ಇಂಜಿನಿಯರಿಂಗ್ ಕಲಿತಿದ್ದರೂ ಈ ಬಗ್ಗೆ ನಾನೇನೂ ಹೇಳಲಾಗದು. ಇಂಜಿನಿಯರ್‌ಗಳೇ ಯೋಜನೆ ರೂಪಿಸಬೇಕಿದ್ದು, ಈ ನಿಟ್ಟಿನಲ್ಲಿ ಎನ್‌ಎಂಪಿಟಿ, ಎಡಿಬಿ ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳನ್ನು ಒಂದೆರೆಡು ದಿನಗಳಲ್ಲಿ ಸ್ಥಳಕ್ಕೆ ಕರೆಸಿ ಚರ್ಚಿಸುತ್ತೇನೆ ಎಂದು ಮುಂದಿನ ಯೋಜನೆ ಬಗ್ಗೆ ತಿಳಿಸಿದರು. ಅಲ್ಲದೆ ಈ ಸಂದರ್ಭದಲ್ಲಿ ಎ.ಸಿ.ಯವರು ಸಮಸ್ಯೆಗಳನ್ನು ಆಲಿಸಿ ನೀಡಿದ ಭರವಸೆ ಕಡಲ ತಡಿಯ ಜನರಲ್ಲಿ ಭರವಸೆಯ ಬೆಳಕನ್ನು ಮೂಡಿಸಿತು. ಈ ಸಂದರ್ಭದಲ್ಲಿ ತಾಲೂಕು ಪಂ. ಸದಸ್ಯ ರವಿಶಂಕರ್, ಕಂದಾಯ ನಿರೀಕ್ಷಕ ಸ್ಟೀಫನ್, ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ ವಿ.ಆಳ್ವ, ಸೋಮೇಶ್ವರ ಗ್ರಾಮ ಪಂ. ಸದಸ್ಯರಾದ ಯೋಗೀಶ್ ಉಚ್ಚಿಲ, ವೇದಾವತಿ, ಸಚಿನ್ ಉಚ್ಚಿಲ, ಇಸ್ಮಾಯಿಲ್ ನಾಗತೋಟ, ಅಜಿತ್ ಸೋಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ವಾರಕ್ಕೊಮ್ಮೆ ಉಳ್ಳಾಲಕ್ಕೆ:
‘ಇದುವರೆಗೆ ನಡೆದ ತಡೆಗೋಡೆ ಕಾಮಗಾರಿಯ ರೂಪುರೇಶೆ ವಿಧಾನಸೌಧದಲ್ಲಾಗಿರಬಹುದು, ಆದರೆ ಮುಂದಕ್ಕೆ ನಿಮ್ಮ ಮುಂದೆಯೇ ನಡೆಯಲಿದೆ, ಈ ಕೆಲಸಕ್ಕಾಗಿ ವಾರದಲ್ಲೊಂದು ದಿನ ಕಚೇರಿ ಬಿಟ್ಟು ಉಳ್ಳಾಲಕ್ಕೆ ಬರುತ್ತೇನೆ’ ಎ.ಸಿ. ರೇಣುಕಾ ಪ್ರಸಾದ್