×
Ad

ಬಾಲ್ಯ ವಿವಾಹದ ವಿರುದ್ಧ ಸಿಡಿದೇಳಿ: ನ್ಯಾಯಾಧೀಶ ಕೆ.ಎಸ್.ಬೀಳಗಿ ಕರೆ

Update: 2017-06-13 23:47 IST

ಮಂಗಳೂರು, ಜೂ.13: ಬಾಲ್ಯ ವಿವಾಹ ಸಮಾಜದ ಅನಿಷ್ಠಗಳಲ್ಲಿ ಒಂದು. ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಯಾರದ್ದೋ ಸ್ವಾರ್ಥಕ್ಕಾಗಿ ಬಾಲ್ಯ ವಿವಾಹವಾಗಿ ತಮ್ಮ ಸುಂದರ ಬದುಕು ಅತಂತ್ರಗೊಳ್ಳುವುದಕ್ಕೆ ಮಕ್ಕಳು ಎಂದೂ ಅವಕಾಶ ಕೊಡಬಾರದು. ಅಂತಹ ಒತ್ತಡ ಬಂದರೆ ಅವುಗಳ ವಿರುದ್ಧ ಸಿಡಿದೇಳಬೇಕು. ಕಾನೂನು ಅಂತಹವರ ರಕ್ಷಣೆಗೆ ಯಾವತ್ತೂ ಇರಲಿದೆ ಎಂದು ಜಿಲ್ಲಾ ನ್ಯಾಯಾಧೀಶ ಕೆ. ಎಸ್. ಬೀಳಗಿ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ದ.ಕ. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ನಗರದ ಬಲ್ಮಠ ಮಹಿಳಾ ಪಪೂ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಬಾಲ್ಯ ವಿವಾಹ ತಡೆ ಮತ್ತು ಶಾಲೆ ಕಡೆ ನನ್ನ ನಡೆ’ ಜಾಗೃತಿ ಆಂದೋಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನಿನಲ್ಲಿ 18 ವರ್ಷ ಮೇಲ್ಪಟ್ಟ ಹುಡುಗಿಯರಿಗೆ ವಿವಾಹಕ್ಕೆ ಅವಕಾಶ ಕಲ್ಪಿಸಲಾಗಿದೆ. ಮದುವೆಗೆ ಮುನ್ನ ಶಿಕ್ಷಣ ಮತ್ತು ಭವಿಷ್ಯದ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸಂಬಂಧಿಕರು, ಪರಿಚಯಸ್ಥರ ಮನೆಗಳಲ್ಲಿ ಬಾಲ್ಯವಿವಾಹಗಳು ಘಟಿಸಿದರೆ ಅದನ್ನು ತಡೆಯಲು ಮುಂದಾಗಬೇಕು. ವಿದ್ಯಾರ್ಥಿ ಯುವ ಸಮುದಾಯ ಜಾಗೃತವಾದಲ್ಲಿ ಸಮಾಜವೂ ಜಾಗೃತಗೊಳ್ಳುತ್ತದೆ ಎಂದು ಜಿಲ್ಲಾ ನ್ಯಾಯಾಧೀಶ ಕೆ. ಎಸ್. ಬೀಳಗಿ ನುಡಿದರು.

ದ.ಕ. ಜಿಲ್ಲೆ ಬುದ್ಧಿವಂತರ ಜಿಲ್ಲೆ ಎನಿಸಿಕೊಂಡರೂ ಅಪರೂಪಕ್ಕೊಮ್ಮೆ ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದನ್ನು ಸಂಪೂರ್ಣ ತೊಲಗಿಸಬೇಕಾದರೆ ಮಕ್ಕಳು ಜಾಗೃತಗೊಳ್ಳಬೇಕು ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ಹೇಳಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನ ಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುಂದರ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ. ಸಂತೋಷ್ ಕುಮಾರ್, ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪಪೂ ಶಿಕ್ಷಣ ಇಲಾಖೆಯ ಶ್ಯಾಂ ಮೊಯ್ಲಿ, ಪಡಿ ಸಂಸ್ಥೆಯ ರೆನ್ನಿ ಡಿಸೋಜ ದ್ದರು. ಬಿಇಒ ಮಂಜುಳಾ, ಕಾಲೇಜು ಪ್ರಾಂಶುಪಾಲೆ ವನಿತಾ ದೇವಾಡಿಗ ಭಾಗವಹಿಸಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ಖಾದರ್ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.

*ಬಾಲ್ಯ ವಿವಾಹ ತಡೆ ಜಾಗೃತಿ ರಥಕ್ಕೆ ಈ ವೇಳೆ ಚಾಲನೆ ನೀಡಲಾಯಿತು.

*ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನ್ಯಾಯವಾದಿ ನಿತೀಶ್ ಶೆಟ್ಟಿ ಮಾತನಾಡಿ, ಬಾಲ್ಯವಿವಾಹಗಳು ನಡೆದಲ್ಲಿ ವರನಿಗೆ ಜೈಲು ಶಿಕ್ಷೆ ಜೊತೆಗೆ 1 ಲಕ್ಷ ರೂ. ದಂಡವನ್ನೂ ವಿಧಿಸಲಾಗುತ್ತದೆ. ಮದುವೆ ಎಂಬುದು ಆಟವಲ್ಲ ಎಂಬುದನ್ನು ಮಕ್ಕಳು ಅರಿತುಕೊಳ್ಳಬೇಕು. ವಯಸ್ಸಿನ ತಪ್ಪಿಗೆ ಜೀವನ ಪರಿತಪಿಸುವಂತಹ ಕೆಲಸಗಳಿಗೆ ಕೈ ಹಾಕಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News