ಹಳೆ ಬಂದರ್‌ನಲ್ಲಿ ಹಮಾಲಿ ಕಾರ್ಮಿಕರ ಶ್ರಮದಾನ
Update: 2017-06-13 23:54 IST
ಮಂಗಳೂರು, ಜೂ.13: ನಗರದ ಹಳೆ ಬಂದರ್ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿದೆ. ಇದನ್ನು ದುರಸ್ತಿಗೊಳಿಸುವಂತೆ ಮನಪಾಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಆ ಹಿನ್ನಲೆಯಲ್ಲಿ ಬಂದರ್‌ನ ಹಮಾಲಿ ಕಾರ್ಮಿಕರು ಮಂಗಳವಾರ ಶ್ರಮದಾನದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಿ ಗಮನ ಸೆಳೆದರು.
ಮುಂಗಾರು ಮಳೆ ಆರಂಭವಾಗುತ್ತಲೇ ರಸ್ತೆ ಗುಂಡಿಯ ಸಂಖ್ಯೆಗಳು ಹೆಚ್ಚಾಗುತ್ತಾ ಹೋಯಿತು. ಅಲ್ಲದೆ ಕಾರ್ಮಿಕರಿಗೆ ತಮ್ಮ ಕೈಗಾಡಿಗಳನ್ನು ದೂಡಿಕೊಂಡು ಹೋಗುವುದು ಅಸಾಧ್ಯವಾಯಿತು. ತಮ್ಮ ಕೆಲಸ-ಕಾರ್ಯಗಳಿಗೆ ಆಗುತ್ತಿರುವ ಅಡಚಣೆಗಳನ್ನು ಮನಗಂಡ ಕಾರ್ಮಿಕರು ತಾವೇ ಹಣ ಸಂಗ್ರಹಿಸಿ ಜಲ್ಲಿ - ಸಿಮೆಂಟ್ ಮಿಶ್ರಣ ಮಾಡಿ ರಸ್ತೆಗೆ ಸುರಿದು ಗುಂಡಿ ಮುಚ್ಚಿ ಮನಪಾದ ಕಣ್ತೆರೆಸುವ ಪ್ರಯತ್ನ ಮಾಡಿದರು.