ಕಲ್ಲಡ್ಕ ಮಸೀದಿ, ಮದ್ರಸಕ್ಕೆ ಕಲ್ಲುತೂರಾಟ: ಖಂಡನೆ
Update: 2017-06-14 12:30 IST
ಬಂಟ್ವಾಳ, ಜೂ.14: ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ನಡೆದ ಅಹಿತಕರ ಘಟನೆಯ ಸಂದರ್ಭದಲ್ಲಿ ಗುಂಪೊಂದು ಕಲ್ಲು ತೂರಾಟ ನಡೆಸಿ ಮಸೀದಿಯ ಸೊತ್ತುಗಳಿಗೆ ಹಾನಿಗೊಳಿಸಿರುವುದನ್ನು ಮಸೀದಿಯ ಕಾರ್ಯದರ್ಶಿ ಹಮೀದ್ ಹಾಜಿ ಗೋಲ್ಡ್ ತೀವ್ರವಾಗಿ ಖಂಡಿಸಿದ್ದಾರೆ.
ಮಸೀದಿಯ ಸಮೀಪದಲ್ಲಿರುವ ಕಲ್ಲಡ್ಕ ಶ್ರೀರಾಮ ಮಂದಿರದ ಮೇಲಿನಿಂದ ಕಿಡಿಗೇಡಿಗಳು ಮಸೀದಿ ಹಾಗೂ ಮದ್ರಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಮಸೀದಿ ಮತ್ತು ಮದ್ರಸದ ಗಾಜುಗಳು ಪುಡಿಯಾಗಿದೆ. ನೀರಿನ ಸಿಂಟೆಕ್ಸ್, ಮದ್ರಸದ ಹಂಚು ಹಾಗೂ ಮಸೀದಿಗೆ ಹೊಸದಾಗಿ ಅಳವಡಿಸಿದ್ದ ಪೈಪ್‍ಲೈನ್‍ಗಳಿಗೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಶ್ರೀರಾಮ ಮಂದಿರದಿಂದ ಮಸೀದಿಗೆ ಕಲ್ಲು ತೂರಾಟ ನಡೆಸಿದ ಎಲ್ಲ ಆರೋಪಿಗಳನ್ನು ಕೂಡಲೇ ಪೊಲೀಸರು ಪತ್ತೆಹಚ್ಚಿ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿರುವ ಅವರು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.