×
Ad

​ಕಲ್ಲಡ್ಕ ಅಹಿತಕರ ಘಟನೆ: ಬಂಧನಕ್ಕೆ ಮೀನಮೇಷ ಯಾಕೆ?

Update: 2017-06-14 17:08 IST

ಮಂಗಳೂರು, ಜೂ.14: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯ ಕ್ಷೇತ್ರ ವ್ಯಾಪ್ತಿಯ ಕಲ್ಲಡ್ಕದಲ್ಲಿ ಕಳೆದ ಎರಡು ವಾರದಲ್ಲಿ ಎರಡು ಅಹಿತಕರ ಘಟನೆ ನಡೆದಿದೆ.

ಈ ಕೃತ್ಯದ ಹಿಂದೆ ನಿರ್ದಿಷ್ಟ ವ್ಯಕ್ತಿಯೊಬ್ಬರ ಪಾತ್ರ ಇದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ ಬಳಿಕವೂ ಈ ವ್ಯಕ್ತಿಯನ್ನು ಬಂಧಿಸಲು ಮೀನಮೇಷ ಮಾಡುವುದು ಯಾತಕ್ಕೆ ಎಂದು ಮಂಗಳೂರು ಸೆಂಟ್ರಲ್ ಕಮಿಟಿ ಪ್ರಶ್ನಿಸಿದೆ.

ರಮಝಾನ್ ಮತ್ತು ಚುನಾವಣೆ ಸಂದರ್ಭ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು ಈ ವ್ಯಕ್ತಿಗೆ ಮಾಮೂಲಿಯಾಗಿದೆ. ಚುನಾವಣೆ ಸಂದರ್ಭ ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರಗಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕವೂ ಈ ವ್ಯಕ್ತಿಯ ಉಪಟಳ ನಿಂತಿಲ್ಲ. ಸಚಿವರು ಕಲ್ಲಡ್ಕ ಗಲಭೆಗೆ ಈ ವ್ಯಕ್ತಿಯೇ ಕಾರಣ ಎಂದು ಹೇಳುತ್ತಾರೆಯೇ ವಿನ: ಬಂಧನಕ್ಕೆ ಕ್ರಮ ಜರಗಿಸುತ್ತಿಲ್ಲ. ಇದು ಯಾಕೆ? ಈ ವ್ಯಕ್ತಿಗೆ ಕಾನೂನು ಅನ್ವಯವಾಗುವುದಿಲ್ಲವೇ ಎಂದು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಆಲಿ ಹಸನ್ ಪ್ರಶ್ನಿಸಿದ್ದಾರೆ.

ಇನ್ನೇನೋ ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಯಲಿದೆ. ಅದಕ್ಕಿಂತ ಮುನ್ನ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಗಲಭೆ ಸೃಷ್ಟಿಯಾಗಬೇಕು. ಆದರೆ ಆಡಳಿತಾರೂಢ ಕಾಂಗ್ರೆಸ್ ಈ ವ್ಯಕ್ತಿಯ ವಿರುದ್ಧ ಕ್ರಮ ಜರಗಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ ಎಂದು ಮಂಗಳೂರು ಸೆಂಟ್ರಲ್ ಕಮಿಟಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News