ಮಾಹಿತಿ ನೀಡದೆ ವಿದ್ಯುತ್ ಕಡಿತ ಬೇಡ
ಮಂಗಳೂರು, ಜೂ.14: ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಮಾಹಿತಿ ನೀಡದೆ ವಿದ್ಯುತ್ ಕಡಿತ ಮಾಡುವುದು ಬೇಡ. ಕನಿಷ್ಠ ಸುದ್ದಿ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಕಟನೆ ಹೊರಡಿಸಿದ ಬಳಿಕವಷ್ಟೇ ವಿದ್ಯುತ್ ಕಡಿತ ಮಾಡಿ ಎಂದು ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿರುವ ಉಳ್ಳಾಲ ಮೆಸ್ಕಾಂ ಕಚೇರಿಯಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ಮೆಸ್ಕಾಂ ಅಧೀಕ್ಷಕ ಅಭಿಯಂತರ ಮಂಜಪ್ಪಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿಯೇ ವಿದ್ಯುತ್ ಕಡಿತಗೊಳಿಸಲಾಗುವುದು. ಪ್ರತೀ ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆಯನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಕೆಇಆರ್‌ಸಿಯಿಂದ ಆದೇಶ ಬಂದಿದೆ, ಶೀಘ್ರದಲ್ಲೇ ವಿದ್ಯುತ್ ಬಿಲ್ ಪಾವತಿಗೆ ಆನ್‌ಲೈನ್ ಸೇವೆ ಆರಂಭಿಸುವ ಯೋಜನೆ ಇದೆ ಎಂದರು.
ದುರಸ್ತಿಯ ಹೆಸರಲ್ಲಿ ವಾರಕ್ಕೊಮ್ಮೆ ವಿದ್ಯುತ್ ಕಡಿತಗೊಳಿಸುವ ಪ್ರಕ್ರಿಯೆ ಮೆಸ್ಕಾಂನಲ್ಲಿಲ್ಲ, ಅಷ್ಟಕ್ಕೂ ದುರಸ್ತಿ ಕೆಲಸವಿದ್ದರೆ ಪತ್ರಿಕೆಗಳಲ್ಲಿ ಪ್ರಕಟನೆ ನೀಡಿದ ಬಳಿಕವಷ್ಟೇ ವಿದ್ಯುತ್ ಕಡಿತಗೊಳಿಸಬೇಕು. ಈ ಬಗ್ಗೆ ಅಧೀಕ್ಷಕ ಅಭಿಯಂತರರಲ್ಲಿ ಅನಮತಿ ಪಡೆಯುವುದು ಅಗತ್ಯವಾಗಿದ್ದರೂ ಆ ಕೆಲಸ ನಡೆಯುತ್ತಿಲ್ಲ ಎಂದು ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಇಂತಹ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ಅಧೀಕ್ಷಕ ಮಂಜಪ್ಪ ಭರವಸೆ ನೀಡಿದರು.