×
Ad

ರಾಷ್ಟ್ರಪತಿ ಚುನಾವಣೆ : ಅಧಿಸೂಚನೆ ಪ್ರಕಟ

Update: 2017-06-14 17:44 IST

ಹೊಸದಿಲ್ಲಿ, ಜೂ.14: ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು ಜೂನ್ 28ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ.

 ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಆಡಳಿತಾರೂಢ ಎನ್‌ಡಿಎ ಒಕ್ಕೂಟ ಮತ್ತು ವಿಪಕ್ಷಗಳ ನಡುವೆ ಮಾತುಕತೆ ಮುಂದುವರಿದಿದ್ದು ಒಂದು ವೇಳೆ ಮಾತುಕತೆ ಫಲಪ್ರದವಾಗದಿದ್ದರೆ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.

 ಒಮ್ಮತದ ಅಭ್ಯರ್ಥಿ ಆಯ್ಕೆ ಕುರಿತಂತೆ ಎನ್‌ಡಿಎ ಮಿತ್ರಪಕ್ಷಗಳು ಮತ್ತು ವಿಪಕ್ಷಗಳ ಜೊತೆ ಮಾತುಕತೆ ನಡೆಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮೂವರು ಸದಸ್ಯರ ಒಂದು ಸಮಿತಿಯನ್ನು ರಚಿಸಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು ಸಮಿತಿಯ ಸದಸ್ಯರಾಗಿದ್ದಾರೆ.

  ಈ ಮಧ್ಯೆ, ಚುನಾವಣೆ ಕಾರ್ಯತಂತ್ರ ರೂಪಿಸಲು ಮತ್ತು ಸಹಮತದ ಅಭ್ಯರ್ಥಿಯನ್ನು ಆರಿಸಲು ವಿಪಕ್ಷಗಳು 10 ಸದಸ್ಯರ ತಂಡವನ್ನು ನೇಮಿಸಿದ್ದು ಈ ತಂಡ ಸಭೆ ಸೇರಿ ಚರ್ಚಿಸಲಿದೆ. ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಸರಕಾರದ ಕ್ರಮವನ್ನು ಕಾದು ನೋಡುವ ತಂತ್ರವನ್ನು ವಿಪಕ್ಷಗಳು ರೂಪಿಸಿವೆ.

 ಯಾರು ಬೇಕಾದರೂ ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವಂತಿಲ್ಲ. ಇದಕ್ಕಾಗಿ ಕೆಲವು ವರ್ಷಗಳ ಹಿಂದೆ ನಿಯಮವನ್ನು ರೂಪಿಸಲಾಗಿದೆ. 50 ‘ಮತದಾರರ’ ಬೆಂಬಲ ಇರುವ ಮತ್ತು ಇನ್ನೂ 50 ‘ಮತದಾರರ’ ಅನುಮೋದನೆ ಪಡೆದವರು ಮಾತ್ರ ನಾಮಪತ್ರ ಸಲ್ಲಿಸಬಹುದು. ಇಲ್ಲಿ ‘ಮತದಾರರು’ ಎಂದರೆ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯಗಳ ವಿಧಾನಸಭಾ ಸದಸ್ಯರು (ಶಾಸಕರು) ಆಗಿರುತ್ತಾರೆ.

ಒಂದು ವೇಳೆ ಒಮ್ಮತದ ಅಭ್ಯರ್ಥಿ ಆಯ್ಕೆ ಸಾಧ್ಯವಾಗದೆ ಚುನಾವಣೆ ಅನಿವಾರ್ಯ ಎಂದಾದರೆ ಜುಲೈ 20ರಂದು ಫಲಿತಾಂಶ ಪ್ರಕಟವಾಗಲಿದೆ. ಹಾಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕಾರ್ಯಾವಧಿ ಜುಲೈ 24ರಂದು ಕೊನೆಗೊಳ್ಳಲಿದೆ.

ಸಭೆ ಸೇರಿದ ಪ್ರತಿಪಕ್ಷ ಉಪಸಮಿತಿ

ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಕಾರ್ಯತಂತ್ರವನ್ನು ರೂಪಿಸಲು ಪ್ರತಿಪಕ್ಷ ನಾಯಕರು ಮಂಗಳವಾರ ಹೊಸದಿಲ್ಲಿಯಲ್ಲಿ ಸಭೆ ನಡೆಸಿದರು.

   ಈ ಉದ್ದೇಶಕ್ಕಾಗಿ ಸ್ಥಾಪನೆಯಾದ ರಚನೆಯಾದ ಪ್ರತಿಪಕ್ಷದ ಉಪಸಮಿತಿಯ ಎಲ್ಲಾ ಹತ್ತು ಮಂದಿ ಸದಸ್ಯರು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರ ಕಚೇರಿಯಲ್ಲಿ ಇಂದು ಮಾತುಕತೆ ನಡೆಸಿದರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ರಚನೆಯಾದ ಈ ಉಪಸಮಿತಿಯು ರಚನೆಯಾದ ಬಳಿಕ ಸಭೆ ನಡೆಸಿರುವುದು ಇದೇ ಮೊದಲ ಸಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News