ಮಂದ್‌ಸೋರ್‌ಗೆ ಸಿಎಂ ಚೌಹಾಣ್ ಭೇಟಿ: ಮೃತ ರೈತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಹಸ್ತಾಂತರ
ಭೋಪಾಲ್, ಜೂ.14: ಇತ್ತೀಚೆಗೆ ರೈತರ ಪ್ರತಿಭಟನೆ ಸಂದರ್ಭ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಐವರು ರೈತರು ಮೃತಪಟ್ಟಿರುವ ಮಂದ್‌ಸೋರ್‌ಗೆ ಆಗಮಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮೃತ ರೈತರ ಮನೆಗೆ ಭೇಟಿ ನೀಡಿದರು. ಅಲ್ಲದೆ ಓರ್ವ ರೈತನ ಕುಟುಂಬ ವರ್ಗದವರಿಗೆ 1 ಕೋಟಿ ರೂ. ಮೊತ್ತದ ಪರಿಹಾರಧನದ ಚೆಕ್ ಹಸ್ತಾಂತರಿಸಿದರು.
ಮಂದ್‌ಸೋರ್‌ನಲ್ಲಿ ನಡೆದ ರೈತರ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೃತಪಟ್ಟ ಆರು ಮಂದಿ ರೈತರ ಕುಟುಂಬದವರಿಗೆ ತಲಾ 1 ಕೋಟಿ ರೂ. ಪರಿಹಾರ ನೀಡುವುದಾಗಿ ಮಧ್ಯಪ್ರದೇಶ ಸರಕಾರ ಮಂಗಳವಾರ ಘೋಷಿಸಿತ್ತು. ಜೂನ್ 6ರಂದು ನಡೆದ ಪ್ರತಿಭಟನೆ ಸಂದರ್ಭ ಪೊಲೀಸರ ಗೋಲಿಬಾರ್‌ನಿಂದ ಐವರು ರೈತರು ಮೃತಪಟ್ಟಿದ್ದರೆ ಮತ್ತೋರ್ವ ರೈತ ಜೂನ್ 9ರಂದು ಮೃತಪಟ್ಟಿದ್ದು ಈತನನ್ನು ಪೊಲೀಸರು ತೀವ್ರವಾಗಿ ಥಳಿಸಿದ್ದರು ಎಂದು ಆರೋಪಿಸಲಾಗಿದೆ.
ಪತ್ನಿ ಸಾಧನಾರೊಂದಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಚೌಹಾಣ್ ಬಳಿಕ ಬದ್ವಾನ್ ಗ್ರಾಮಕ್ಕೆ ತೆರಳಿ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ರೈತ ಘನಶ್ಯಾಮ್ ಧಕಡ್ ಕುಟುಂಬದವರಿಗೆ 1 ಕೋಟಿ ರೂ. ಹಸ್ತಾಂತರಿಸಿದರು. ಗೋಲಿಬಾರ್ ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭ ಮುಖ್ಯಮಂತ್ರಿ ಭರವಸೆ ನೀಡಿದರು. ಲೋಧ್, ನಾಯಖೇಡ, ಪಿಪ್ಲಿಮಂಡಿ, ಬರ್‌ಖೆಡ ಪಂತ್ ಮತ್ತು ಬುಧ ಗ್ರಾಮಕ್ಕೂ ಮುಖ್ಯಮಂತ್ರಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಈ ಗ್ರಾಮಗಳಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ.
ಇದಕ್ಕೂ ಮುನ್ನ ಮಂದ್‌ಸೋರ್‌ಗೆ ಭೇಟಿ ನೀಡಲು ಮುಂದಾದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿಂಧಿಯಾರಿಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ ಘಟನೆ ನಡೆಯಿತು.