×
Ad

ಏಕಾಗ್ರತೆ ಮತ್ತು ಏಕನಿಷ್ಠೆ ಇಲ್ಲದೆ ಯಶಸ್ಸಿನ ಮಾರ್ಗ ಪ್ರವೇಶಿಸಲು ಸಾಧ್ಯವಿಲ್ಲ : ರಾಘವೇಶ್ವರ ಸ್ವಾಮೀಜಿ

Update: 2017-06-14 18:38 IST

ಪುತ್ತೂರು,ಜೂ.14 : ಏಕಾಗ್ರತೆ ಮತ್ತು ಏಕನಿಷ್ಠೆ ಇಲ್ಲದೆ ಯಶಸ್ಸಿನ ಮಾರ್ಗ ಪ್ರವೇಶಿಸಲು ಸಾಧ್ಯವಿಲ್ಲ. ಒಂದು ವಿಷಯವನ್ನು ತೆಗೆದುಕೊಂಡು ಕನಸು ಕಾಣುವ ಜೊತೆಗೆ ಏಕಾಗ್ರತೆ ಮತ್ತು ಏಕನಿಷ್ಠೆಯಿಂದ ಮುಂದುವರಿದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಹೆಳಿದರು.

ಅವರು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಇಲ್ಲಿನ ತೆಂಕಿಲ ವಿವೇಕನಗರದಲ್ಲಿ ನೂತನವಾಗಿ ಆರಂಭಿಸಲಾದ ನರೇಂದ್ರ ಪದವಿ ಪೂರ್ವ ಕಾಲೇಜನ್ನು ಬುಧವಾರ ಲೋಕಾರ್ಪಣೆಗೈದು ಮಾತನಾಡಿದರು.

ನಾವು ಕೇವಲ ಮನುಷ್ಯರಾಗಿ ಬದುಕಿದರೆ ಸಾಲದು, ದೇವಮಾನವರಾಗಬೇಕು. ಮನುಷ್ಯನನ್ನು ದೇವತ್ವಕ್ಕೇರಿಸುವುದೇ ಶಿಕ್ಷಣದ ಉದ್ದೇಶವಾಗಬೇಕು ಎಂದ ಅವರು, ನರೇಂದ್ರ ಅಂದರೆ ಮನುಷ್ಯ ಮತ್ತು ಇಂದ್ರನ ಸಂಗಮವಾಗಿದ್ದು, ಆದರ್ಶದ ಹಾದಿ ತೋರುವ ,ದೇಶಕಟ್ಟುವ ಚಿಂತನೆ ಬೆಳೆಸುತ್ತಿರುವ ಈ ವಿದ್ಯಾಸಂಸ್ಥೆ ಅಭಿನಂದಾರ್ಹವಾಗಿದ್ದು, ಇಲ್ಲಿ ಕಲಿಯುತ್ತಿರುವ ಪ್ರತಿಯೊಬ್ಬ ಮಕ್ಕಳು ನರೇಂದ್ರರಾಗಬೇಕು ಎಂದರು.


ನರೇಂದ್ರ ಪದವಿ ಪೂರ್ವ ಕಾಲೇಜಿನ ಲಾಂಛನ ಬಿಡುಗಡೆಗೊಳಿಸಿದ ದಾವಣಗೆರೆ ಚನ್ನಗಿರಿ ಪಾಂಡುಮಟ್ಟಿ ವಿರಕ್ತ ಮಠದ ಗುರುಬಸವ ಮಹಾಸ್ವಾಮೀಜಿ ಅವರು, ವಿದ್ಯೆ ಇದ್ದವ ಎಲ್ಲಾದರೂ ಬದುಕಬಲ್ಲ, ಅಪಹರಣ ಮಾಡಲಾಗದ ಸಂಪತ್ತು ಅದು. ವಿದ್ಯೆ ಯಾರಪ್ಪನ ಸೊತ್ತೂ ಅಲ್ಲ. ಸಾಧನೆ ಮಾಡಿದವರಿಗೆ ವಿದ್ಯೆ ಕರಗತವಾಗುತ್ತದೆ. ಆದರೆ ವಿನಯವಂತಿಕೆ ಇದ್ದರೆ ಮಾತ್ರ ವಿದ್ಯೆಗೆ ಭೂಷಣ ಬರುತ್ತದೆ,ಬೆಲೆ ಸಿಗುತ್ತದೆ ಎಂದರು.

ವಿದ್ಯೆ ಕಪಿಮುಷ್ಟಿಯಲ್ಲಿ ಸಿಲುಕಿಕೊಳ್ಳಬಾರದು, ಅದು ಸದಾ ನಲಿದಾಡುತ್ತಿರಬೇಕು ಎಂದ ಅವರು ಈ ಹಿಂದೆ ಕೆಲವೇ ಕೆಲವು ಮಂದಿಯ ಕೈಯಲ್ಲಿದ್ದ ವಿದ್ಯೆ ಇದೀಗ ಸಾರ್ವತ್ರಿಕವಾಗಿದೆ. ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಮಂದಿ ಮಕ್ಕಳು ನೂರಕ್ಕೆ ನೂರು ಅಂಕ ಪಡೆಯುತ್ತಿದ್ದಾರೆ ಎಂದರೆ ನಾವು ಹೆಮ್ಮೆಪಡಬೇಕಾದ ವಿಚಾರ ಎಂದು ಅವರು ತಿಳಿಸಿದರು.

 ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ರೂಪರೇಖಾ, ಕಾರ್ಯದರ್ಶಿ ವಿನಯಕೃಷ್ಣ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸಂತೋಷ್, ವಿದ್ಯಾವರ್ಧಕ ಸಂಘದ ನಿರ್ದೇಶಕ ವಾಮನ ಪೈ ಮತ್ತಿತರರು ಉಪಸ್ಥಿತರಿದ್ದರು.

 ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಅವರು ಸ್ವಾಗತಿಸಿದರು. ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವೇಶ್ವರ ಭಟ್ ವಂದಿಸಿದರು.ಉಪನ್ಯಾಸಕಿ ಹರಿಣಿ ಪುತ್ತೂರಾಯ ನಿರೂಪಿಸಿದರು.  ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನರೇಂದ್ರ ಪದವಿ ಪೂರ್ವ ಕಾಲೇಜನ್ನು ಲೋಕಾರ್ಪಣೆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News