×
Ad

ಗೋರಕ್ಷಣೆಗಾಗಿ ಮತ್ತು ‘ಲವ್ ಜಿಹಾದ್ ’ವಿರುದ್ಧ ಹೋರಾಡಲು ತ್ರಿಶೂಲ ವಿತರಣೆ

Update: 2017-06-14 19:28 IST

ಅಹ್ಮದಾಬಾದ್,ಜೂ.14: ಗಾಂಧಿನಗರದಲ್ಲಿ ಸೋಮವಾರ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಜಂಟಿಯಾಗಿ ಆಯೋಜಿಸಿದ್ದ ತ್ರಿಶೂಲ ದೀಕ್ಷಾ ಕಾರ್ಯಕ್ರಮದಲ್ಲಿ 75 ಯುವಕರಿಗೆ ತ್ರಿಶೂಲಗಳನ್ನು ವಿತರಿಸಲಾಗಿದೆ. ಗೋರಕ್ಷಣೆ,‘ಲವ್ ಜಿಹಾದ್ ’ವಿರುದ್ಧ ಹೋರಾಟ ಮತ್ತು ಶಿಕ್ಷಣ ಸಂಸ್ಥೆಗಳ ಬಳಿ ರೋಮಿಯೊ ನಿಗ್ರಹ ದಳಗಳ ಕಾರ್ಯಾಚರಣೆ ಗಳಿಗೆ ನೆರವಾಗಲು ತ್ರಿಶೂಲಗಳನ್ನು ವಿತರಿಸಲಾಗಿದೆ ಎಂದು ಈ ಸಂಘಟನೆಗಳು ಹೇಳಿಕೊಂಡಿವೆ.

ಕಳೆದ ಎರಡೂವರೆ ವರ್ಷಗಳಲ್ಲಿ ಗಾಂಧಿನಗರ ಜಿಲ್ಲೆಯಲ್ಲಿ ಸುಮಾರು 4,000 ತ್ರಿಶೂಲಗಳನ್ನು ಯುವಜನರಿಗೆ ವಿತರಿಸಲಾಗಿದೆ ಎಂದು ವಿಹಿಂಪ ಪ್ರಧಾನ ಕಾರ್ಯದರ್ಶಿ ಮಹಾವೀರ ದೇಸಾಯಿ ಅವರು ತಿಳಿಸಿದರು.

ಕಳೆದ ಐದು ತಿಂಗಳುಗಳಲ್ಲಿ ಪ್ರತಿ ತಿಂಗಳು ಗಾಂಧಿನಗರದಲ್ಲಿ ಒಂದು ತ್ರಿಶೂಲ ದೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕೊನೆಯ ಕಾರ್ಯಕ್ರಮ ಸೆಕ್ಟರ್ 7ರಲ್ಲಿ ನಡೆದಿದೆ ಎಂದು ವಿಹಿಂಪ ಮೂಲಗಳು ತಿಳಿಸಿವೆ.

 ಕಳೆದ ಆರು ಕಾರ್ಯಕ್ರಮಗಳಲ್ಲಿ ಸುಮಾರು 700 ತ್ರಿಶೂಲಗಳನ್ನು ವಿತರಿಸಲಾಗಿದೆ. ಈ ತ್ರಿಶೂಲಗಳು ಮನೆಯಲ್ಲಿ ಪ್ರದರ್ಶನಕ್ಕಿಡುವುದಕ್ಕಲ್ಲ, ಹೊರಗೆ ತಿರುಗಾಡುವಾಗ ತ್ರಿಶೂಲಗಳನ್ನು ಜೊತೆಯಲ್ಲಿಯೇ ಒಯ್ಯುವಂತೆ ಯುವಕರಿಗೆ ನಾವು ಸ್ಪಷ್ಟ ನಿರ್ದೇಶ ನೀಡಿದ್ದೇವೆ ಎಂದು ದೇಸಾಯಿ ತಿಳಿಸಿದರು.

 ಶಸ್ತ್ರಾಸ್ತ್ರಗಳೊಂದಿಗೆ ತಿರುಗುವುದು ಅಪರಾಧವಲ್ಲವೇ ಎಂಬ ಪ್ರಶ್ನೆಗೆ ದೇಸಾಯಿ, ತ್ರಿಶೂಲಗಳು ಶಸ್ತ್ರಾಸ್ತ್ರಗಳ ವರ್ಗದಲ್ಲಿ ಬರುವುದಿಲ್ಲ. ಅವು ನಿಷೇಧಿತ ಶಸ್ತ್ರಾಸ್ತ್ರಗಳಿಗಿಂತ ಒಂದು ಸೆ.ಮೀ. ಕಿರಿದಾಗಿವೆ. ಹೀಗಾಗಿ ಗೋರಕ್ಷಣೆಗೆ ಅವುಗಳನ್ನು ಬಳಸಬಹುದಾಗಿದೆ. ಗುಜರಾತ್‌ನಲ್ಲಿ ಗೋಹತ್ಯೆ ನಡೆದಿರುವ ಅನೇಕ ನಿದರ್ಶನಗಳಿವೆ ಮತ್ತು ಈ ಅಪರಾಧವನ್ನು ನಿಲ್ಲಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಹಿಂದು ಯುವಕರು ಮುಂದೆ ಬಂದು ಗೋರಕ್ಷಣೆಗಾಗಿ ಹೋರಾಡಬೇಕಾದ ಕಾಲವೀಗ ಬಂದಿದೆ ಎಂದು ದೇಸಾಯಿ ಹೇಳಿದರು.

ಅಲ್ಲದೆ ‘ಲವ್ ಜಿಹಾದ್ ’ಪಿಡುಗನ್ನು ನಿಯಂತ್ರಿಸಲು ಮತ್ತು ನಗರದಲ್ಲಿಯ ಶಿಕ್ಷಣ ಸಂಸ್ಥೆಗಳ ಬಳಿ ರೋಮಿಯೊ ನಿಗ್ರಹ ದಳಗಳ ಸ್ಥಾಪನೆಗೆ ನಾವು ಶ್ರಮಿಸುತ್ತಿದ್ದೇವೆ ಎಂದರು.

ತ್ರಿಶೂಲವು ಶಿವನ ವಿಶ್ವಾಸ ಮತ್ತು ಶಕ್ತಿಯ ಸಂಕೇತವಾಗಿದೆ ಎಂದ ಗಾಂಧಿನಗರ ಬಜರಂಗ ದಳ ಅಧ್ಯಕ್ಷ ಶಕ್ತಿಸಿಂಹ ರಲಾ, ಹಿಂದುತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಿಂದು ಯುವಕರ ಶಕ್ತಿಶಾಲಿ ಪಡೆಯನ್ನು ರೂಪಿಸಲು ನಾವು ಬಯಸಿದ್ದು, ನಮ್ಮ ತ್ರಿಶೂಲ ದೀಕ್ಷಾ ಕಾರ್ಯ್ರಮವು ಈ ಅಭಿಯಾನದ ಭಾಗವಾಗಿದೆ ಎಂದರು.

 ತನ್ಮಧ್ಯೆ ಗಾಂಧಿನಗರ ಎಸ್‌ಪಿ ವೀರೇಂದ್ರಸಿಂಹ್ ಯಾದವ ಅವರು, ಕಾನೂನು ಎಲ್ಲರಿಗೂ ಒಂದೇ ಅಗಿದೆ. ಯುವಕರ ಬಳಿ ತ್ರಿಶೂಲಗಳು ಪತ್ತೆಯಾದರೆ ಅವರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದ ತಿಳಿಸಿದರು.

ವಿಹಿಂಪ ಮತ್ತು ಬಜರಂಗ ದಳ ಜೂ.20ರಂದು ಕಲೋಳ್‌ನಲ್ಲಿ ಬೃಹತ್ ತ್ರಿಶೂಲ ದೀಕ್ಷಾ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News