ಉದ್ಯೋಗಸ್ಥ ಮಹಿಳೆಯರಿಗಾಗಿ ಇಲ್ಲಿದೆ ಎಲೆಕ್ಟ್ರಾನಿಕ್ಸ್ ತೊಟ್ಟಿಲು
ಮಂಗಳೂರು, ಜೂ.14: ಗಂಡ ಹೆಂಡತಿ ಇಬ್ಬರೂ ಉದ್ಯೋಗಿಗಳಾಗಿದ್ದರೆ ತಮ್ಮ ಎಳೆಯ ಮಕ್ಕಳನ್ನು ನೋಡಿಕೊಳ್ಳುವುದೇ ಒಂದು ಸವಾಲು. ಇಂತಹದ್ದೊಂದು ಸಕಾಲಿಕ ಸಮಸ್ಯೆಗೆ ತಂತ್ರಜ್ಞಾನದ ನೆರವಿನಿಂದ ಖುಷಿ ಕೊಡುವ ರೀತಿಯಲ್ಲಿ ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ಬಿ.ಇ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಮೂಲಕ ಪ್ರಯತ್ನಿಸಿದ್ದಾರೆ.
ವಿದ್ಯಾರ್ಥಿಗಳ ಅನ್ವೇಷಣೆಯಿಂದ ರೂಪುಗೊಂಡಿರುವ ಈ ಇಲೆಕ್ಟ್ರಾನಿಕ್ ತೊಟ್ಟಿಲು ಸ್ವಯಂ ತೂಗಬಲ್ಲದು. ತೊಟ್ಟಿಲಲ್ಲಿರುವ ಮಗು ಅತ್ತಾಗ ಅಳವಡಿಸಲಾಗಿರುವ ಮೈಕ್ರೋ ಪೋನ್ ಮೂಲಕ ಗ್ರಹಿಸಿ ತೊಟ್ಟಿಲು ತೂಗಲಾರಂಭಿಸುತ್ತದೆ. ಇದೇ ವೇಳೆ ಜಿ.ಎಸ್.ಎಂ ಮೊಡ್ಯೂಲ್ ಬಳಸಿ ಮಗುವಿನ ಹಾಸಿಗೆ ಒದ್ದೆಯಾದರೆ ಹೆತ್ತವರ ಮೊಬೈಲ್‌ಗೆ ಸಂದೇಶ ರವಾನೆಯಾಗುವ ವ್ಯವಸ್ಥೆಯೂ ಇಲ್ಲಿದೆ.
ಮಗು ಅತ್ತಾಗಲೆಲ್ಲ ತೊಟ್ಟಿಲು ತೂಗುವುದರ ಜತೆಗೆ ನಿಗದಿತ ಅವಧಿಯೊಳಗೆ ಮಗು ಅಳು ನಿಲ್ಲಿಸದೇ ಹೋದಾಗಲೂ ಮೊಬೈಲ್ ಮೂಲಕ ಹೆತ್ತವರಿಗೆ ‘ಗಮನ ಕೊಡಿ’ ಎನ್ನುವ ಸಂದೇಶ ರವಾನೆಯಾಗುತ್ತದೆ. ತೊಟ್ಟಿಲಿಗೆ ಅಳವಡಿಸಲಾಗಿರುವ ವೆಬ್ ಕ್ಯಾಮ್ ಮೂಲಕ ಹೆತ್ತವರೂ ಮಗು ಏನು ಮಾಡುತ್ತಿದೆ ಎನ್ನುವುದನ್ನು ಗಮನಿಸುವಂತೆ ಸೌಲಭ್ಯ ಕಲ್ಪಿಸಲಾಗಿದೆ.
ಕಾಲೇಜಿನ ಸಹ ಪ್ರಾಧ್ಯಾಪಕಿ ಜಯಶ್ರೀ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ವರದರಾಜ ಭಟ್, ಸುಪರ್ಣಾ ಪೈ, ಸ್ನೇಹಾ ಎಚ್. ಭಟ್, ವರುಣ್ ಶೆಣೈ ಈ ತೊಟ್ಟಿಲನ್ನು ರೂಪಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಟ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.