ಬಾಂಗ್ಲಾ ಭೀಕರ ಭೂಕುಸಿತ: 144 ಸಾವು

Update: 2017-06-14 15:21 GMT

ಢಾಕಾ, ಜೂ. 14: ಬಾಂಗ್ಲಾದೇಶದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಅದರಿಂದ ಉಂಟಾಗಿರುವ ಭೂಕುಸಿತಗಳಿಂದ ಮೃತಪಟ್ಟವರ ಸಂಖ್ಯೆ 144ಕ್ಕೆ ಏರಿದೆ.

ಸರಕಾರವು ಬುಧವಾರ ಹೊಸದಾಗಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

ಆಗ್ನೇಯದ ರಂಗಮತಿ ಗುಡ್ಡಗಾಡು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಾವು ನೋವುಗಳು ಸಂಭವಿಸಿವೆ. ಅಲ್ಲಿ ಕನಿಷ್ಠ 20 ಭೂಕುಸಿತಗಳು ಸಂಭವಿಸಿದ್ದು, 105 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ನಾಲ್ವರು ಸೇನಾ ಸಿಬ್ಬಂದಿಯೂ ಮೃತಪಟ್ಟಿದ್ದಾರೆ.

ಬಂದರ್ಬನ್ ಮತ್ತು ಚಿತ್ತಗಾಂಗ್ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಇತರ ಎರಡು ಜಿಲ್ಲೆಗಳು.

ಆಗ್ನೇಯ ಭಾಗದ ಪರ್ವತಗಳಲ್ಲಿ ಟನ್‌ಗಟ್ಟಳೆ ಅವಶೇಷಗಳಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಮೂರು ದಿನಗಳ ಅವಧಿಯಲ್ಲಿ ಸುರಿದ ಭಾರೀ ಮಳೆಯಲ್ಲಿ ಮೃತಪಟ್ಟವರ ಸಂಖ್ಯೆ 129 ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಮೃತರ ಸಂಖ್ಯೆ 144ನ್ನೂ ಮೀರಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಭಾರೀ ಮಳೆಯು ಸೋಮವಾರದಿಂದ ಹಲವು ಭೂಕುಸಿತಗಳಿಗೆ ಕಾರಣವಾಯಿತು.

4,000 ನಿರಾಶ್ರಿತರು

ಭೂಕುಸಿತದಿಂದ ಬದುಕುಳಿದ ಸುಮಾರು 4,000 ಮಂದಿಯನ್ನು 18 ಸರಕಾರಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಭೂಕುಸಿತಗಳಲ್ಲಿ ಅವರ ಮನೆಗಳು ಹೂತುಹೋಗಿವೆ.

ದೂರದ ಸ್ಥಳಗಳಿಗೆ ತಲುಪಲು ರಕ್ಷಣಾ ಕಾರ್ಯಕರ್ತರು ಪರದಾಡುತ್ತಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆ ಪ್ರದೇಶಗಳ ಟೆಲಿಫೋನ್ ಮತ್ತು ಸಾರಿಗೆ ಸಂಪರ್ಕ ಕಡಿದುಹೋಗಿದೆ.

ನಾಲ್ವರು ಸೈನಿಕರ ಭೂಸಮಾಧಿ

ರಂಗಮತಿ ಜಿಲ್ಲೆಯಲ್ಲಿ ಒಮ್ಮೆ ಉಂಟಾದ ಭೂಕುಸಿತದ ಅವಶೇಷಗಳನ್ನು ಸೇನೆ ತೆರವುಗೊಳಿಸುತ್ತಿದ್ದಾಗ ಹೊಸದಾಗಿ ಭೂಕುಸಿತ ಸಂಭವಿಸಿದೆ. ಆಗ 15 ಸೈನಿಕರು 30 ಅಡಿ ಎತ್ತರದ ಅವಶೇಷಗಳಡಿ ಸಿಲುಕಿದರು. ಈ ಸಂದರ್ಭದಲ್ಲಿ ನಾಲ್ವರು ಸೈನಿಕರು ಸ್ಥಳದಲ್ಲೇ ಮೃತಪಟ್ಟರು. ಮೃತಪಟ್ಟವರಲ್ಲಿ ಓರ್ವ ಮೇಜರ್ ಮತ್ತು ಓರ್ವ ಕ್ಯಾಪ್ಟನ್ ಸೇರಿದ್ದಾರೆ ಎಂದು ಢಾಕಾದಲ್ಲಿ ಸೇನಾ ವಕ್ತಾರರೊಬ್ಬರು ತಿಳಿಸಿದರು.

ಓರ್ವ ಸೈನಿಕ ಈಗಲೂ ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News