×
Ad

‘ನಂಡೆ ಪೆಂಙಳ್’ ಯೋಜನೆ ಯಶಸ್ವಿಗೊಳಿಸೋಣ: ಸಚಿವ ಯು.ಟಿ. ಖಾದರ್‌

Update: 2017-06-14 20:59 IST

ಮಂಗಳೂರು, ಜೂ. 14: ಆರ್ಥಿಕವಾಗಿ ಹಿಂದುಳಿದ 30 ಹರೆಯ ಮೀರಿದ ಮುಸ್ಲಿಂ ಹೆಣ್ಮಕ್ಕಳ ವಿವಾಹ ಕಾರ್ಯಕ್ರಮ ನೆರವೇರಿಸುವ ‘ನಂಡೆ ಪೆಂಙಳ್’ ಯೋಜನೆಯನ್ನು ಎಲ್ಲರ ಸಹಭಾಗಿತ್ವದೊಂದಿಗೆ ಯಶಸ್ವಿಗೊಳಿಸೋಣ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹಾರೈಸಿದ್ದಾರೆ.

ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಸಾರಥ್ಯದಲ್ಲಿ ನಗರದ ಐಎಂಎ ಹಾಲ್‌ನಲ್ಲಿ ಬುಧವಾರ ನಡೆದ ‘ನಂಡೆ ಪೆಂಙಳ್’ ಸ್ನೇಹ ಸಂಗಮ ಮತ್ತು ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.

ಸೌಹಾರ್ದ ಮತ್ತು ಸಹೋದರತೆಗೆ ಒತ್ತು ನೀಡುತ್ತಿರುವ ಅಬ್ದುಲ್ ರವೂಫ್ ಪುತ್ತಿಗೆ ಅವರ ಸಾರಥ್ಯದ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಕಳೆದ ಹಲವು ವರ್ಷಗಳಿಂದ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು, ಶೈಕ್ಷಣಿಕ ಸಹಿತ ಇತರ ಕ್ಷೇತ್ರಗಳಲ್ಲಿ ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸುತ್ತಾ ಮಾದರಿ ಸಂಸ್ಥೆಯಾಗಿದೆ.

‘ನಂಡೆ ಪೆಂಙಳ್’ ಯೋಜನೆಗೆ ನನ್ನಿಂದಾಗುವ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಸಮಾಜದ ಎಲ್ಲ ವರ್ಗದವರ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳುವಂತಾಗಲಿ. ಸಮುದಾಯದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಯುವಕರು ಕಾಳಜಿ ವಹಿಸಬೇಕೇ ಹೊರತು ಸಮಸ್ಯೆ ಸೃಷ್ಟಿಗೆ ಕಾರಣೀಭೂತರಾಗಬಾರದು. ಇಂತಹ ಕಾರ್ಯಗಳಿಗೆ ತಾಳ್ಮೆ, ಪ್ರೀತಿ ಮತ್ತು ವಿಶ್ವಾಸದ ಅಗತ್ಯವಿದೆ ಎಂದರು.

ಜಾತ್ಯಾತೀತ ಜನತಾದಳದ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಮಾತನಾಡಿ, ಬಡ ಹೆಣ್ಣು ಮಕ್ಕಳ ಮದುವೆಗೆ ಉತ್ತೇಜನ ನೀಡುವ ‘ನಂಡೆ ಪೆಂಙಳ್’ ಯೋಜನೆಗೆ ಸಹಾಯ ನೀಡಲು ಸಿದ್ಧನಿದ್ದೇನೆ. ಇಂತಹ ಉತ್ತಮ ಕಾರ್ಯಗಳಿಗೆ ಸಮಾಜದ ಎಲ್ಲರೂ ಸಹಕಾರ ನೀಡುವಂತಾಗಬೇಕು ಎಂದರು.

ರಫೀಕ್ ಮಾಸ್ಟರ್ ಅವರು ‘ನಂಡೆ ಪೆಂಙಳ್’ ಯೋಜನೆಯ ಅಭಿಯಾನದ ಮನೆ ಮನೆ ಭೇಟಿ ಸಂದರ್ಭದಲ್ಲಿ 30 ವರ್ಷ ಮೀರಿದ ಅವಿವಾಹಿತ ಬಡ ಮುಸ್ಲಿಂ ಹೆಣ್ಣು ಮಕ್ಕಳು ಮತ್ತು ಅವರ ಹೆತ್ತವರು ಎದುರಿಸುತ್ತಿರುವ ಸಮಸ್ಯೆಗಳು, ಮಾನಸಿಕ ವೇದನೆ, ಮದುವೆಯಾಗದ ಕೊರಗು, ವಯಸ್ಸು ಮೀರಿದ ಅವಮಾನದಿಂದ ಮನೆಯಿಂದ ಹೊರಬಾರದ ಹೆಣ್ಣು ಮಕ್ಕಳ ಸ್ಥಿತಿಗಳ ಬಗ್ಗೆ ಬೆಳಕು ಚೆಲ್ಲಿದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ವೈಟ್ ಸ್ಟೋನ್ ಗ್ರೂಪ್‌ನ ಆಡಳಿತ ನಿರ್ದೇಶಕ ಬಿ.ಮುಹಮ್ಮದ್ ಶರೀಫ್, ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ಅಬ್ದುಲ್ ರವೂಫ್ ಪುತ್ತಿಗೆ, ಹುಸೇನ್ ದಾರಿಮಿ ರೆಂಜಲಾಡಿ, ಲೆಕ್ಕಪರಿಶೋಧಕ ಝಮೀರ್ ಅಂಬರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾವುಟಗುಡ್ಡೆ ಈದ್ಗಾ ಮಸೀದಿಯ ಖತೀಬ್ ಸದಖತುಲ್ಲಾಹ್ ನದ್ವಿ ದುವಾ ನೆರವೇರಿಸಿದರು. ನಂಡೆ ಪೆಂಙಳ್ ಯೋಜನೆಯ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಆಝಾದ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News