ಕಲ್ಲಡ್ಕದಲ್ಲಿ ಅಹಿತಕರ ಘಟನೆ: ಒಂಭತ್ತು ಪ್ರಕರಣ ದಾಖಲು
Update: 2017-06-14 21:23 IST
ಕಲ್ಲಡ್ಕ, ಜೂ. 14: ಮಂಗಳವಾರ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಬುಧವಾರ ಸಂಜೆಯ ವೇಳೆಗೆ ಒಟ್ಟು ಒಂಭತ್ತು ಪ್ರಕರಣಗಳು ದಾಖಲಾಗಿದೆ.
ಈ ಸಂಬಂಧ ಇತ್ತಂಡಗಳ ಸುಮಾರು 18 ಮಂದಿಯನ್ನು ಬಂಧಿಸಲಾಗಿದೆ. ಇನ್ನಷ್ಟು ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದೆ. ಘಟನೆಯಿಂದ ನಾಲ್ಕು ಮಂದಿ ಗಾಯಗೊಂಡಿದ್ದು, ಒಂದು ಮಾರುತಿ ಓಮ್ನಿ, ನಾಲ್ಕು ಬೈಕ್, ಐದು ಅಂಗಡಿ, ಒಂದು ಮನೆಗೆ ಹಾನಿ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಜಿಪಿ ಭೇಟಿ: ಪಶ್ಚಿಮ ವಲಯದ ಐಜಿಪಿ ಬುಧವಾರ ಸಂಜೆ ಕಲ್ಲಡ್ಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಬಂಟ್ವಾಳ ನಗರ ಠಾಣೆಗೆ ಭೇಟಿ ನೀಡಿದ ಅವರು ಠಾಣೆಯಲ್ಲಿ ಮೊಕ್ಕಂ ಹೂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಉಪಸ್ಥಿತರಿದ್ದ ಹೆಚ್ಚುವರಿ ಎಸ್ಪಿ ವೇದಮೂರ್ತಿ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್. ಮೊದಲಾದ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಕಾಲ ಸಭೆ ನಡೆಸಿದರು.