ವಿದ್ಯುತ್ ತಂತಿಗಳ ಲೋಪ ಪತ್ತೆ ಸಾಧನ!

Update: 2017-06-14 16:19 GMT

ಮಂಗಳೂರು, ಜೂ.14: ವಿದ್ಯುತ್ ಪ್ರಸರಣ ಮತ್ತು ವಿತರಣೆ ಅದೊಂದು ದೊಡ್ಡ ಜಾಲ. ಇದರ ನಿರ್ವಹಣೆಯೇ ದೊಡ್ಡ ಸವಾಲು. ಬೆಳೆಯುತ್ತಿರುವ ಬೇಡಿಕೆಗಳ ನಡುವೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ವಿದ್ಯುತ್ ಪೂರೈಕೆ ಮಾಡುವಾಗ ಸಂರಕ್ಷಣಾ ವ್ಯವಸ್ಥೆಯ ಅಗತ್ಯವೂ ಇದೆ. ಆಕಸ್ಮಿಕ ಘಟನೆಗಳು, ನೈಸರ್ಗಿಕ ಪ್ರಕೋಪಗಳಿಂದಾಗಿ ವಿದ್ಯುತ್ ತಂತಿಗಳಲ್ಲಿ ದೋಷಗಳು ಕಂಡು ಬರುವುದಿದೆ. ಈ ದೋಷಗಳನ್ನು ಕೂಡಲೇ ಪತ್ತೆ ಹಚ್ಚುವ ಮೂಲಕ ಶ್ರಮ, ಸಮಯ, ವಿದ್ಯುತ್ ನಷ್ಟ ಉಳಿಸಿ ದೋಷಗಳಿಗೆ ಪರಿಹಾರ ಹುಡುಕುವಲ್ಲಿಯೂ ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ಬಿ.ಇ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿದ್ಯಾರ್ಥಿಗಳು ಸಫಲರಾಗಿದ್ದಾರೆ.

ಇವರು ರೂಪಿಸಿರುವ ಲೋರಾ ಆಧಾರಿತ ವ್ಯವಸ್ಥೆಯಲ್ಲಿ ವಿದ್ಯುತ್ ತಂತಿಗಳ ಸ್ಥಿತಿಗತಿಯನ್ನು ಯಾವುದೇ ಸ್ಥಳದಿಂದ ನೆಟ್ವರ್ಕ್ ಸರ್ವರ್ ಮೂಲಕ ಪರಿಶೀಲಿಸಬಹುದಾಗಿದೆ. ಇಲ್ಲಿ ಪಾಲ್ಟ್ ಡಿಟೆಕ್ಟರ್ ವ್ಯವಸ್ಥೆ ಲೋಪ ಇರುವ ಸ್ಥಳ ಮತ್ತು ಈ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತದೆ.

ಕಾಲೇಜಿನ ಸಹ ಪ್ರಾಧ್ಯಾಪಕಿ ಕಾವ್ಯ ಎ.ಡಿ.ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪ್ರೀತಮ್ ಐವನ್ ಡಿಸೋಜಾ ನವಮಿ ಕಿಣಿ, ವೆಂಕಟೇಶ, ಮಾಧವ ಶೆಣೈ ಮೆಸ್ಕಾಂ ತಾಂತ್ರಿಕ ವಿಭಾಗದ ಸಚಿನ್ ಅವರ ಸಲಹೆಯೊಂದಿಗೆ ಈ ಪ್ರಾಜೆಕ್ಟ್ ರೂಪಿಸಿದ್ದಾರೆ.

ಎಲ್.ಪಿ.ಜಿ. ಸುರಕ್ಷೆ:
ಮನೆ ಮತ್ತು ಕೆಲಸದ ಏರಿಯಾಗಳಲ್ಲಿ ಸುರಕ್ಷೆ ಇಂದಿನ ಪ್ರಮುಖ ಆದ್ಯತೆಯಾಗಿದೆ. ಮಿತ ವ್ಯಯದಲ್ಲಿ ಮನೆ ಮತ್ತು ಕಛೇರಿಗಳಲ್ಲಿ ಎಲ್.ಪಿ.ಜಿ. ಅನಿಲ ಸೋರುವಿಕೆಯ ಕುರಿತು ನಿಖರ ಹಾಗೂ ಸುರಕ್ಷಾ ಮಾಹಿತಿಯನ್ನು ನೀಡುವ ಸಾಧನವನ್ನು ಎಂಜಿನಿಯರಿಂಗ್ ಪ್ರಾಜೆಕ್ಟ್ ಮೂಲಕ ಇಲ್ಲಿ ವಿದ್ಯಾರ್ಥಿಗಳು ರೂಪಿಸಿದ್ದಾರೆ. ಅನಿಲ ಸೋರಿಕೆಯ ಪತ್ತೆ, ಸಂವನೀಯ ಅಪಾಯದ ಸಮಯ, ತಡೆಗೆ ಕ್ರಮ ಈ ವ್ಯವಸ್ಥೆಯಲ್ಲಿದೆ.

ಎಂಕ್ಯೂ ಸೆನ್ಸಾರ್ 6 ಬಳಸಿ ರೂಪಿಸಲಾಗಿರುವ ಈ ಸಾಧನದಲ್ಲಿ ಗ್ಯಾಸ್ ಸಿಲಿಂಡರ್ ತೂಕ ತಿಳಿಸುವ ಮೂಲಕ ಸಿಲಿಂಡರ್ ಬದಲಾವಣೆಯ ಸೂಚನೆ ಸಿಗುತ್ತದೆ.ಕಾಲೇಜಿನ ಸಹ ಪ್ರಾಧ್ಯಾಪಕ ಅನುಪ್ ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಮನು ವೆಂಕಟೇಶ್, ಪೂಜಾ ಎಸ್, ನಿಶಾಂತ್ ಜೊಯೆಲ್ ಮಾರ್ಟಿಸ್, ನಿಶ್ಮಿತಾ ನಾಕ್ ಈ ಪ್ರಾಜೆಕ್ಟ್ ರೂಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News