ಶೇಡಿಮನೆ ಬಾಲಕಿಯ ಆತ್ಮಹತ್ಯೆ ಯತ್ನ ಪ್ರಕರಣ: ಜಾಮೀನಿಗಾಗಿ ಆರೋಪಿಗಳು ನ್ಯಾಯಾಲಯಕ್ಕೆ
ಉಡುಪಿ, ಜೂ.14: ಅಮಾಸೆಬೈಲು ಠಾಣಾ ವ್ಯಾಪ್ತಿಯ ಶೇಡಿಮನೆ ಗ್ರಾಮದ ಆರಸಮ್ಮಕಾನು ಎಂಬಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಕಿರುಕುಳ ಹಾಗೂ ಆಕೆಯ ಆತ್ಮಹತ್ಯೆ ಪ್ರಯತ್ನಕ್ಕೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಇಬ್ಬರು ಆರೋಪಿಗಳು ಜಾಮೀನಿಗಾಗಿ ಪ್ರಯತ್ನಿಸಿದ್ದು, ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಿತು.
ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಆರೋಗ್ಯ ಸ್ಥಿತಿಯ ಕುರಿತು ಸಂಪೂರ್ಣ ವೈದ್ಯಕೀಯ ವರದಿಯನ್ನು ಕೋರ್ಟ್‌ಗೆ ಸಲ್ಲಿಸುವಂತೆ ನ್ಯಾಯಾಧೀಶರು ತನಿಖಾಧಿಕಾರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿದರು.
ಈಗಾಗಲೇ ಪೊಲೀಸರ ಬಂಧನದಲ್ಲಿರುವ ಆರೋಪಿ ವಿನಯ ಶೆಟ್ಟಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೆ, ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿ ಪ್ರಶಾಂತ್ ಹೆಗ್ಡೆ ಪರ ನಿರೀಕ್ಷಣಾ ಜಾಮೀನು ಅರ್ಜಿ ವಕೀಲರ ಮೂಲಕ ಕೋರ್ಟ್‌ಗೆ ಸಲ್ಲಿಸಲ್ಪಟ್ಟಿದೆ. ಈ ಎರಡೂ ಅರ್ಜಿಗಳ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪ್ರಸಾದ್ ಹೆಗ್ಡೆ ನಿರೀಕ್ಷಣಾ ಜಾಮೀನಿಗೆ ಇದುವರೆಗೆ ಅರ್ಜಿ ಸಲ್ಲಿಸಿಲ್ಲ. ಆತನ ಬಂಧನಕ್ಕೆ ಅಮಾಸೆಬೈಲು ಪೊಲೀಸರು ಕಾರ್ಯಾಚರಣೆ ನಡೆಸುತಿದ್ದಾರೆ.
ಇಂದು ಇಬ್ಬರು ಆರೋಪಿಗಳ ಪರವಾಗಿ ಉಡುಪಿ ಮತ್ತು ಕುಂದಾಪುರದ ನ್ಯಾಯವಾದಿಗಳು ಜಾಮೀನು ನೀಡುವಂತೆ ನ್ಯಾಯಾಲಯದ ಮುಂದೆ ವಾದ ಮಂಡಿಸಿದರು. ಪ್ರತಿವಾದ ಮಂಡಿಸಿದ ವಿಶೇಷ ಸರಕಾರಿ ಅಭಿಯೋಜಕ (ಪೋಕ್ಸೋ) ವಿಜಯ ವಾಸು ಪೂಜಾರಿ, ಆರೋಪಿಗಳಿಗೆ ಜಾಮೀನು ನೀಡವುದನ್ನು ವಿರೋಧಿಸಿ ವಾದ ಮಂಡಿಸಿದರು.
ತಮ್ಮ ವಾದಕ್ಕೆ ಮುಂಬಯಿಯ ಆಸ್ಪತ್ರೆಯಲ್ಲಿ 42 ವರ್ಷಗಳ ಕಾಲ ಜೀವನ್ಮರಣ ಮಧ್ಯ ಹೋರಾಡಿದ ನರ್ಸ್ ಅರುಣಾ ಶಾನುಭಾಗ್ ಪ್ರಕರಣ ಸೇರಿದಂತೆ ಹಲವು ತೀರ್ಪುಗಳನ್ನು ಉಲ್ಲೇಖಿಸಿ ತಮ್ಮ ವಾದ ಮಂಡಿಸಿದರು.
ಆತ್ಯಹತ್ಯೆಗಾಗಿ ಬಾಲಕಿ ಕುಡಿದ ವಿಷ ಅತ್ಯಂತ ಅಪಾಯಕಾರಿಯಾಗಿದ್ದು, ಇದರಿಂದ ಆಕೆಯ ದೇಹದ ಮೇಲೆ ಯಾವ ಪರೀಣಾಮ ಉಂಟಾಗುತ್ತಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವಿಷ ಕುಡಿದವರು ಮೇಲ್ನೋಟಕ್ಕೆ ಆರೋಗ್ಯವಂತರಂತೆ ಕಂಡರೂ, ಆಂತರಿಕ ಆರೋಗ್ಯ ಹದಗೆಟ್ಟಿರುತ್ತದೆ ಎಂದವರು ವಿವರಿಸಿದರು.
ಬಾಲಕಿ ಇನ್ನೂ ಆಸ್ಪತ್ರೆಯಲ್ಲಿದ್ದಾಳೆ. ಹೀಗಾಗಿ ಆರೋಪಿಗಳಿಗೆ ಜಾಮೀನು ನೀಡದಂತೆ ಅವರು ವಾದಿಸಿದರು. ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಿ ಪರಿಸ್ಥಿತಿ ಬಿಗಡಾಯಿಸಬಹುದು ಎಂದರು.12 ದಿನಗಳ ಬಳಿಕವೂ ಆಕೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಜಾಮೀನು ಅರ್ಜಿ ವಜಾ ಮಾಡಬೇಕು ಎಂದು ಸರಕಾರಿ ಅಭಿಯೋಜಕರು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಟಿ.ವೆಂಕಟೇಶ್ ನಾಯ್ಕಾ, ಬಾಲಕಿಯ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ಆದೇಶಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.