ಹಣ ನೀಡದೆ ವಂಚನೆ: ದೂರು
ಉಡುಪಿ, ಜೂ.14: ಅವಧಿ ಮುಗಿದರೂ ತಾವು ಕಟ್ಟಿದ ಹಣವನ್ನು ನೀಡದೆ ವಂಚಿಸಿದ ಕುರಿತು ಬ್ರಹ್ಮಗಿರಿಯ ಪರಿಣಿತಾ ಪ್ರಾಪರ್ಟಿಸ್ ಎಂಡ್ ಇನ್‌ಫ್ರಾಸ್ಟ್ರಚರ್ ಲಿ.ನ ಆಡಳಿತ ನಿರ್ದೇಶಕ ಎಸ್.ಮಂಜುನಾಥ ಎಂಬವರ ವಿರುದ್ಧ ಐರೋಡಿಯ ಗೀತಾ ಸುವರ್ಣ ಎಂಬವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಐರೋಡಿ ಪಾಂಗಾಳದ ಗೀತಾ ಸುವರ್ಣ ಅವರು ಏಜೆಂಟರುಗಳ ಮೂಲಕ ಈ ಹಣಕಾಸು ಸಂಸ್ಥೆಯಲ್ಲಿ ತಿಂಗಳಿಗೆ 300 ರಂತೆ 2013ರ ಅ.22ರಿಂದ 2016ರ ಆ.27ರವರೆಗೆ ಒಟ್ಟು 10,800ರೂ. ಪಾವತಿಸಿದ್ದು, ಕಂಪೆನಿಯ ನಿಯಮದಂತೆ ಅವರಿಗೆ ಅವಧಿ ಮುಗಿದ ಬಳಿಕ 13,800ರೂ. ಪಾವತಿಸಬೇಕಿತ್ತು. ಅದೇ ರೀತಿ ಗೀತಾ ಸುವರ್ಣರ ಪತಿ ಚಿನ್ನ ಸುವರ್ಣ ಅವರು ತಿಂಗಳಿಗೆ 1,000 ರೂ.ನಂತೆ ಒಟ್ಟು 36,000 ರೂ. ಪಾವತಿಸಿದ್ದು, ಅವರಿಗೆ 46,000ರೂ. ನೀಡಬೇಕಿತ್ತು. ಆದರೆ ಅವಧಿ ಮುಗಿದರೂ ಹಣ ಪಾವತಿಸದೇ, ಕಂಪೆನಿಯ ಎಲ್ಲಾ ಶಾಖೆಗಳನ್ನು ಬಂದ್ ಮಾಡಿ ವಂಚಿಸಿರುವುದಾಗಿ ಗೀತಾ ಸುವರ್ಣ ದೂರಿನಲ್ಲಿ ತಿಳಿಸಿದ್ದಾರೆ. ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.