×
Ad

ಕಲ್ಲಡ್ಕ ಅಹಿತಕರ ಘಟನೆ: ಗಾಳಿ ಸುದ್ದಿಗೆ ಕಿವಿಗೊಡಬೇಡಿ; ಎಸ್ಪಿ ಮನವಿ

Update: 2017-06-14 22:40 IST

ಬಂಟ್ವಾಳ, ಜೂ.14: ಪ್ರಕ್ಷುಬ್ದಗೊಂಡಿದ್ದ ಕಲ್ಲಡ್ಕದಲ್ಲಿ ಶಾಂತಿ ನೆಲೆಸಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಕಲ್ಲಡ್ಕ ಪರಿಸರ ಸಹಿತ ತಾಲೂಕಿನ ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ತಿಳಿಸಿದ್ದಾರೆ. 

ಬಂಟ್ವಾಳ ನಗರ ಠಾಣೆಯಲ್ಲಿ ತನ್ನನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಘರ್ಷಣೆಯ ಬಳಿಕ ಹಲವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ಬಳಿಕ ಅಮಾಯಕರನ್ನು ಬಿಟ್ಟು ಬಿಡಲಾಗುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದರು. 

ಕಲ್ಲಡ್ಕ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಯಾವುದೇ ಗಾಳಿಸುದ್ದಿಗೆ ಕಿವಿಗೊಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು, ಮಂಗಳವಾರ ರಾತ್ರಿ ಮೆಲ್ಕಾರ್‍ನಲ್ಲಿ ಪವನ್ ಕುಮಾರ್ ಎಂಬಾತನ ಮೇಲೆ ನಡೆದ ದಾಳಿ ಕಲ್ಲಡ್ಕ ಘಟನೆಯ ಮುಂದುವರಿದ ಭಾಗವೆಂದು ಪರಿಗಣಿಸಲು ಆಗುವುದಿಲ್ಲ. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ದಾಳಿ ಆಗಿದೆಯೇ ಎಂಬ ನೆಲೆಯಲ್ಲೂ ತನಿಖೆ ನಡೆಸಲಾಗುವುದು. ಪವನ್‍ನ ಹಣೆ ಮತ್ತು ಎದೆ ಭಾಗಕ್ಕೆ ಚೂರಿಯಿಂದ ಇರಿಯಲಾಗಿದ್ದು, ಆಳವಾದ ಗಾಯವಾಗಿರದ ಕಾರಣ ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News