ರಕ್ತದಾನದ ಬಗ್ಗೆ ತಪ್ಪುಕಲ್ಪನೆ ಬಿಟ್ಟುಬಿಡಿ: ನ್ಯಾ.ಲತಾ
ಉಡುಪಿ, ಜೂ.14: ರಕ್ತದಾನದ ಕುರಿತು ಅನೇಕ ಮಂದಿ ತಪ್ಪು ತಿಳಿದಿದ್ದಾರೆ. ಆದರೆ ರಕ್ತದಾನದಿಂದ ಒಬ್ಬ ವ್ಯಕ್ತಿಯ ಜೀವ ಉಳಿಸಬಹುದಾಗಿದ್ದು, ಯಾವುದೇ ತಪ್ಪು ಅಭಿಪ್ರಾಯ ಇಟ್ಟುಕೊಳ್ಳದೇ ಪ್ರತಿಯೊಬ್ಬರೂ ರಕ್ತದಾನ ಮಾಡಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಹೇಳಿದ್ದಾರೆ.
ಬುಧವಾರ ಉಡುಪಿ ಅಜ್ಜರಕಾಡಿನಲ್ಲಿರುವ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಕ್ತದಾನ ಮಾಡುವುದರಿಂದ ನಿಶ್ಯಕ್ತಿ, ಅನಾರೋಗ್ಯ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಅಶಕ್ತರು, ಅನಾರೋಗ್ಯ ಪೀಡಿತರನ್ನು ಹೊರತು ಪಡಿಸಿ, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ 56 ದಿನಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ರಕ್ತದಾನದಿಂದ ದೇಹದಲ್ಲಿ ಶುದ್ದ ರಕ್ತ ಉತ್ಪಾದನೆಯಾಗುವುದರಿಂದ, ವ್ಯಕ್ತಿ ಆರೋಗ್ಯವಂತರಾಗುವುದಲ್ಲದೇ, ಇನ್ನಷ್ಟು ಚಟುವಟಿಕೆಯಿಂದ ಕ್ರಿಯಾಶೀಲರಾಗಿರಬಹುದು ಎಂದರು.
ರಕ್ತದಾನ ಅತ್ಯಮೂಲ್ಯವಾದ ದಾನ. ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಮತ್ತೊಬ್ಬರ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಲತಾ ಹೇಳಿದರು. ಕಾರ್ಯಕ್ರಮದಲ್ಲಿ 59 ಬಾರಿ ರಕ್ತದಾನ ಮಾಡಿದ ಕೆಎಂಸಿ ಮಣಿಪಾಲದ ಟಿ.ನರಹರಿ ಪೈ ಮತ್ತು 45 ಬಾರಿ ರಕ್ತದಾನ ಮಾಡಿದ ಮುದರಂಗಡಿಯ ಉಪನ್ಯಾಸಕರಾದ ದೇವದಾಸ್ ಪಾಟ್ಕರ್‌ರನ್ನು ಸನ್ಮಾನಿಸಲಾಯಿತು.
ಹೆಚ್ಚು ಬಾರಿ ರಕ್ತದಾನ ಮಾಡಿದ ವಿದ್ಯಾರ್ಥಿಗಳಾದ ಬ್ರೆಂಡನ್ ಲೋಬೋ, ಬ್ಲೆನ್ಸಿಲ್ ಲೆವಿಸ್, ಶೈಲೇಶ್ ಕುಂದರ್, ಅಭಿಲಾಷ್ ಆರ್ ಜತ್ತನ್ನ, ವಿಶ್ವಾಸ್, ಶ್ರೀನಾಥ್ ಪ್ರಭು ಹಾಗೂ ನಾಗೇಶ್‌ರನ್ನು ಸಹ ಸನ್ಮಾನಿಸಲಾಯಿತು.
ಉಡುಪಿ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ.ಉಮೇಶ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಅರವಿಂದ ನಾಯಕ್ ಅಮ್ಮುಂಜೆ ಉಪಸ್ಥಿತರಿದ್ದರು.
ಉಡುಪಿ ರೆಡ್‌ಕ್ರಾಸ್‌ನ ಉಪಸಭಾಪತಿ ಡಾ.ಅಶೋಕ್ ಕುಮಾರ್ ಸ್ವಾಗತಿಸಿ ಕಾರ್ಯದರ್ಶಿ ಜೆ.ಸಿ. ಜನಾರ್ಧನ ವಂದಿಸಿದರು. ಜೂನಿಯರ್ ರೆಡ್‌ಕ್ರಾಸ್ ಅಧ್ಯಕ್ಷ ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.