ಕಲ್ಲಡ್ಕದಲ್ಲಿ ಅಹಿತಕರ ಘಟನೆ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ
ಕಲ್ಲಡ್ಕ , ಜೂನ್ 14: ಕಳೆದ ಹಲವು ದಿನಗಳಿಂದ ಕಲ್ಲಡ್ಕವು ನಿರಂತರವಾಗಿ ಸದ್ದು ಮಾಡುತ್ತಲೇ ಇದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಕಲ್ಲಡ್ಕ ನಿನ್ನೆ ಇದ್ದಕ್ಕಿದ್ದಂತೆ ಹಿಂಸಾರೂಪ ಪಡೆದುಕೊಂಡಿತ್ತು. ತಣ್ಣಗಿದ್ದ ಕಲ್ಲಡ್ಕದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಲವರು ಅಲ್ಲಿನ ಚಿತ್ರಣವನ್ನೇ ಬದಲಿಸಲು ಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಎಸ್ ಪಿ ಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಅಹಿತಕರ ಘಟನೆಗೆ ಕಾರಣಗಳು ಏನು ? ಅದಕ್ಕೆ ಕಾರಣೀಕರ್ತರು ಯಾರು? ಈ ಘಟನೆಯಿಂದ ಅನೇಕರ ಆಸ್ತಿ ಪಾಸ್ತಿ ಹಾನಿಯಾಗಿದೆ ಇದ್ದಕ್ಕೆಲ್ಲಾ ಯಾರು ಹೊಣೆ? ನಿಜವಾದ ತಪ್ಪಿತಸ್ಥರನ್ನು ಹೊರಗಿಟ್ಟು ಅಮಾಯಕರ ಮೇಲೆ ಎಲ್ಲಾ ತಪ್ಪನ್ನು ಹೊರಿಸಿ ಪ್ರಕರಣದ ದಿಕ್ಕು ತಪ್ಪಿಸುತ್ತಿರುವುದರ ಹಿಂದೆ ಯಾರ ಕೈ ವಾಡವಿದೆ? ಎನ್ನುವುದಕ್ಕೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿಯ ಮೂಲಕ ಎಸ್ ಪಿಯವರನ್ನು ಒತ್ತಾಯಿಸಿದ್ದಾರೆ.
ಸಂಸದರೊಂದಿಗೆ ಉ.ಕ. ಸಂಸದ ಅನಂತ ಕುಮಾರ್ ಹೆಗಡೆ, ಮೋನಪ್ಪ ಬಂಡಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹಾಗೂ ಇನ್ನಿತರ ಭಾಜಪ ನಾಯಕರು ಭಾಗಿಯಾಗಿದ್ದರು. ಸಮಸ್ಯೆಯ ಬಗ್ಗೆ ಚರ್ಚಿಸಿ ನಿಜವಾದ ಅರೋಪಿಗಳನ್ನು ಬಂಧಿಸಿ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.