ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರಿಗೆ 27.93 ಲಕ್ಷ ರೂ. ಪರಿಹಾರ: ರೋಶನ್ ಬೇಗ್
ಮಂಗಳೂರು, ಜೂ.15: ತುಂಬೆ ವೆಂಟೆಡ್ ಡ್ಯಾಂ ಕಿಂಡಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸುವಾಗ ಮುಳುಗಡೆಯಾದ ರೈತರ ಜಮೀನಿಗೆ ಪರಿಹಾರವಾಗಿ ನೀಡಲು 7 ಕೋ.ರೂ. ಅನುದಾನ ಸರಕಾರದಿಂದ ಬಿಡುಗಡೆಯಾಗಿದೆ. ಖಾಸಗಿ 367.97.75 ಎಕರೆ ಪಟ್ಟಾ ಜಮೀನು ಹಾಗೂ ಸರಕಾರಿ ಜಮೀನು ಸೇರಿ 477.61 ಎಕರೆ ಮುಳುಗಡೆಯಾಗಲಿದೆ. ಅದರಲ್ಲಿ 19.77 ಎಕರೆ ಮುಳುಗಡೆಯಾಗಿರುವ ಜಮೀನಿನ 23 ರೈತರಿಗೆ 27.93 ಲಕ್ಷ ರೂ.ವನ್ನು ತಾತ್ಕಾಲಿಕ ಪರಿಹಾರವಾಗಿ ಪಾವತಿಸಲಾಗಿದೆ. ರೈತರ ಜಮೀನಿಗೆ ಬೆಲೆ ನಿಗದಿಪಡಿಸಿ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ನಗರಾಭಿವೃದ್ಧಿ ಸಚಿವ ಆರ್. ರೋಶನ್ ಬೇಗ್ ಹೇಳಿದರು.
ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ಪ್ರಶ್ನೆಗೆ ಅವರು ಉತ್ತರಿಸಿದರು.
ಮಂಗಳೂರು ನಗರಕ್ಕೆ ಬೇಸಿಗೆ ಕಾಲದಲ್ಲಿ ಸಮಗ್ರವಾಗಿ ನೀರು ಪೂರೈಕೆ ಮಾಡಲು 14.76 ಎಂ.ಸಿ.ಎಂ (ಮಿಲಿಯನ್ ಕ್ಯೂಬಿಕ್ ಮೀಟರ್) ನೀರನ್ನು ಸಂಗ್ರಹಿಸುವುದು ಅಗತ್ಯವಾಗಿರುತ್ತದೆ. ಇದಕ್ಕಾಗಿ 250,00 ಕೋ.ರೂ. ಅನುದಾನ ಬೇಕಾಗಿದೆ. ನಗರಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರನ್ನು ತುಂಬೆ ವೆಂಟೆಡ್ ಡ್ಯಾಮ್‌ನಿಂದ ಪೂರೈಸಲಾಗುತ್ತಿದ್ದು, ತಾಂತ್ರಿಕ ಅಡಚಣೆ ಉಂಟಾದಲ್ಲಿ ಬೋರ್‌ವೆಲ್‌ಗಳಿಂದ ನೀರು ಪೂರೈಸಲಾಗುತ್ತದೆ. ನಗರಪಾಲಿಕೆ ವ್ಯಾಪ್ತಿಯಲ್ಲಿ 190 ಬೋರ್‌ವೆಲ್‌ಗಳಿದ್ದು, 83 ಕೊಳವೆ ಬಾವಿಗಳು ನೀರಿನ ಕೊರತೆ ಇಲ್ಲದಿರುವುದರಿಂದ ಜೋಡಣೆ ಕಡಿತಗೊಳಿಸಲು ಕ್ರಮ ವಹಿಸಲಾಗಿದೆ ಎಂದರು.