ಹಸಿವಿನ ಅರಿವು ನೀಡುವ ರಮಝಾನ್ ಉಪವಾಸ

Update: 2017-06-15 13:19 GMT

ಪವಿತ್ರ ಕುರ್ ಆನ್ ಅವತೀರ್ಣಗೊಂಡ ತಿಂಗಳು ರಮಝಾನ್ ಈಗಾಗಲೇ ಆರಂಭವಾಗಿದೆ. ರಮಝಾನ್ ಮುಸ್ಲಿಮರಿಗೆ ಉಪವಾಸದ ತಿಂಗಳಾಗಿದೆ. ಉಪವಾಸವೆಂದರೆ ಕೇವಲ ಅನ್ನ ಪಾನೀಯಗಳಿಂದ ದೂರವಿರುವುದಲ್ಲ, ಕೆಡುಕು, ದುರ್ವ್ಯಸನಗಳಿಂದ ದೂರವಿರುವುದಾಗಿದೆ. ಹಿಂದೂಗಳು ವಾರಕ್ಕೊಮ್ಮೆಯೋ, ಎರಡು ಸಲವೋ ಅಥವಾ ಶಿವರಾತ್ರಿ, ಸಂಕಷ್ಠಿ ಮೊದಲಾದ ದಿನಗಳಲ್ಲಿ ಉಪವಾಸ ಆಚರಿಸುವುದಿದೆ.

ದೇವರು, ಧರ್ಮದ ಪರಿಧಿಯ ಹೊರಗೂ ಉಪವಾಸಕ್ಕೆ ತನ್ನದೇ ಆದ ಅರ್ಥ ಮತ್ತು ಮೌಲ್ಯವಿದೆ. ಅದು ಎಷ್ಟರ ಮಟ್ಟಿಗೆ ಧಾರ್ಮಿಕವೋ ಅದಕ್ಕಿಂತ ಹೆಚ್ಚಾಗಿ ಸಾಮಾಜಿಕವೂ ಮಾನವೀಯವೂ ಆದ ಪರಿಕಲ್ಪನೆಯನ್ನು ಹೊಂದಿದೆ. ಪಶು-ಪಕ್ಷಿಗಳಿರಲಿ, ಮನುಷ್ಯನಿರಲಿ ಪ್ರತಿಯೊಂದು ಜೀವಕ್ಕೂ ದುಡಿಮೆ, ಬಿಡುವುಗಳೆರಡೂ ಮುಖ್ಯ. ನಿರಂತರವಾಗಿ ಕಾರ್ಯನಿರ್ವಹಿಸಿ ಕಾದು ಬಿಸಿಯಾಗುವ ಯಂತ್ರಕ್ಕೂ ಕಾಲಕಾಲಕ್ಕೆ ಬಿಡುವು ನೀಡಿ ಬಳಸಿದರೆ ಬಾಳಿಕೆ ಬರುತ್ತದೆ. ಮನುಷ್ಯನ ಒಡಲು ಸಹ ಒಂದು ಯಂತ್ರವೇ. ತಿಂದ ಆಹಾರವನ್ನು ಅರೆದು ಕರಗಿಸುವ ಜಠರವೂ ಅಂತಹ ಒಂದು ಯಂತ್ರ. ಸದಾ ಕಾಲ ತಿನ್ನುತ್ತಲೇ ಇದ್ದರೆ ಅದಕ್ಕೆ ಬಿಡುವು ಸಿಗುವುದಾದರೂ ಹೇಗೆ? ಅದಕ್ಕೆ ಬಿಡುವು ನೀಡಬೇಕೆಂದರೆ ಕೆಲ ಸಮಯವಾದರೂ ಹೊಟ್ಟೆಯನ್ನು ಖಾಲಿ ಬಿಡಬೇಕು. ಪಚನಕ್ರಿಯೆಯ ಅವಯವಗಳಿಗೆ ಬಿಡುವು ಸಿಕ್ಕಿ ಅವು ಇನ್ನೂ ಹೆಚ್ಚು ಉತ್ತಮವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಉಪವಾಸದಿಂದ ಇದು ಸಾಧ್ಯವಾಗುತ್ತದೆ.

ಉಪವಾಸದಿಂದಾಗುವ ಇನ್ನೊಂದು ಪ್ರಮುಖವಾದ ಅನುಭವ ನಮ್ಮನ್ನು ಹೆಚ್ಚು ಸಾಮಾಜಿಕರನ್ನಾಗಿಸುವುದು. ಜೊತೆಗೆ ಮಾನವೀಯ ತುಡಿತ-ಮಿಡಿತಗಳಿಗೂ ಉಪವಾಸ ಕಾರಣವಾಗುತ್ತದೆ. ಹೊಟ್ಟೆ ತುಂಬಿದವರಿಗೆ ಹಸಿದವರ ಸಂಕಟ ಅರ್ಥವಾಗುವುದಿಲ್ಲ. ನೊಂದವರಿಗೆ ಮಾತ್ರವೇ ನೋವಿನ ಅನುಭವವಿರುತ್ತದೆ. ಆ ಅರಿವನ್ನು ರಮಝಾನ್ ಉಪವಾಸ ನೀಡುತ್ತದೆ. ರಮ್ಜಾನ್ ತಿಂಗಳಲ್ಲಿ ನೀಡಲಾಗುವ ದಾನಗಳೂ ಹಸಿವಿನ ಅನುಭವದ ಪ್ರೇರಣೆಯಿಂದಲೇ ಎಂದರೆ ತಪ್ಪಾಗದು. ಉಪವಾಸವು ನೋವಿನ ಸಂಕಟವನ್ನು ಗ್ರಹಿಸುವ ಅನುಭವ ನೀಡುವುದರ ಜೊತೆಗೆ, ಹಸಿದ ಹೊಟ್ಟೆಯನ್ನು ತಣಿಸಬೇಕೆಂಬ ಅರಿವನ್ನೂ ನೀಡುತ್ತದೆ.

Writer - ಪ್ರೊ.ಆರ್. ಎಸ್. ನಾಯಕ, ಭಟ್ಕಳ

contributor

Editor - ಪ್ರೊ.ಆರ್. ಎಸ್. ನಾಯಕ, ಭಟ್ಕಳ

contributor

Similar News