ಜಿಎಸ್‌ಟಿ ಜಾರಿ: ಎರಡು ತಿಂಗಳು ಮುಂದೂಡಿಕೆಗೆ ನಾಗರಿಕ ವಾಯುಯಾನ ಸಚಿವಾಲಯದ ಆಗ್ರಹ
ಹೊಸದಿಲ್ಲಿ,ಜೂ.15: ವಿಮಾನಯಾನ ಸಂಸ್ಥೆಗಳು ತಮ್ಮ ಕಂಪ್ಯೂಟರ್ ಸಿಸ್ಟಮ್‌ಗಳನ್ನು ನೂತನ ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮಾಡಲು ಸಮಯಾವಕಾಶದ ಅಗತ್ಯವಿರುವುದರಿಂದ ಜುಲೈ 1ರಿಂದ ನಿಗದಿಗೊಂಡಿರುವ ಜಿಎಸ್‌ಟಿ ಜಾರಿಯನ್ನು ಎರಡು ತಿಂಗಳು ಮುಂದೂಡುವಂತೆ ನಾಗರಿಕ ವಾಯುಯಾನ ಸಚಿವಾಲಯವು ವಿತ್ತ ಸಚಿವಾಲಯವನ್ನು ಆಗ್ರಹಿಸಿದೆ.
ವಿಮಾನಯಾನ ಸಂಸ್ಥೆಗಳು ಜಿಎಸ್‌ಟಿಗೆ ಹೊಂದಿಕೆಯಾಗುವಂತೆ ತಮ್ಮ ಕಂಪ್ಯೂಟರ್ ಗಳನ್ನು ಇನ್ನಷ್ಟೇ ಪರಿವರ್ತಿಸಬೇಕಿದೆ ಎಂದು ತಿಳಿಸಿದ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು, ಏರ್ ಇಂಡಿಯಾ ಸೇರಿದಂತೆ ಈ ಸಂಸ್ಥೆಗಳು ಜಿಎಸ್‌ಟಿಯಲ್ಲಿನ ಕೆಲವು ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ ಎಂದರು.
ಜಿಎಸ್‌ಟಿಗೆ ಹೊಂದಿಕೆಯಾಗುವಂತೆ ಜಾಗತಿಕ ಟಿಕೆಟ್ ವಿತರಣೆ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲು ಕಾಲಾವಕಾಶ ಬೇಕಾಗುತ್ತದೆ ಎಂದಿರುವ ವಿಮಾನಯಾನ ಸಂಸ್ಥೆ ಅಧಿಕಾರಿಗಳು, ವಿಮಾನಯಾನ ಉದ್ಯಮಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳಲ್ಲಿ ಸ್ಪಷ್ಟತೆಯ ಕೊರತೆಯು ಹೆಚ್ಚಿನ ಕಾರ್ಯಾಚರಣೆ ವೆಚ್ಚದ ಆತಂಕವನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ. ಅಲ್ಲದೇ ಉಪಕರಣಗಳು ಅಥವಾ ವಿಮಾನದ ಬಿಡಿಭಾಗಗಳ ಸಾಗಾಟದ ಮೇಲೂ ಜಿಎಸ್‌ಟಿಯಡಿ ತೆರಿಗೆ ಹೇರುವ ಸಾಧ್ಯತೆ ಯಿಂದಾಗಿ ವಿಮಾನಯಾನ ಸಂಸ್ಥೆಗಳು ಗೊಂದಲಕ್ಕೆ ಸಿಲುಕಿವೆ.
ಸಹಾಯಕ ನಾಗರಿಕ ವಾಯುಯಾನ ಸಚಿವ ಜಯಂತ್ ಸಿನ್ಹಾ ಅವರು ಬುಧವಾರ ಜಿಎಸ್‌ಟಿ ಸನ್ನದ್ಧತೆಯನ್ನು ಪರಿಶೀಲಿಸಲು ವಿಮಾನಯಾನ ಸಂಸ್ಥೆಗಳು,ವಿಮಾನ ನಿಲ್ದಾಣಗಳು ಮತ್ತು ಕಾರ್ಗೋ ಸೇವೆಗಳ ಪ್ರತಿನಿಧಿಗಳ ಸಭೆಯೊಂದನ್ನು ಕರೆದಿದ್ದರು.