ಶಿವಸೇನೆ ಗಿನ್ನೆಸ್ ವಿಶ್ವ ದಾಖಲೆಗೆ ಅರ್ಹ ಎಂದ ಕಾಂಗ್ರೆಸ್ ಶಾಸಕ: ಕಾರಣವೇನು ಗೊತ್ತೇ?
ಹೊಸದಿಲ್ಲಿ,ಜೂ.15: ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರಕಾರಕ್ಕೆ ಬೆಂಬಲವನ್ನು ಹಿಂದೆಗೆದುಕೊಳ್ಳುವುದಾಗಿ ಪದೇ ಪದೇ ಬೆದರಿಕೆಯೊಡ್ಡುತ್ತಿರುವುದಕ್ಕಾಗಿ ಶಿವಸೇನೆಯು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ಸ್ಥಾನ ಪಡೆಯಲು ಅರ್ಹವಾಗಿದೆ ಎಂದು ಕಾಂಗ್ರೆಸ್ ನಾಯಕ ನಿತೇಶ ರಾಣೆ ಅವರು ಗುರುವಾರ ವ್ಯಂಗ್ಯವಾಡಿದ್ದಾರೆ. ಇದು ವಿಶ್ವದಲ್ಲಿಯೇ ಇಂತಹ ಮೊದಲ ದಾಖಲೆಯಾಗಲಿದ್ದು, ಇದನ್ನು ನೋಂದಾಯಿಸಿಕೊಳ್ಳುವಂತೆ ಕೋರಿ ಅವರು ಗಿನ್ನೆಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ತನ್ನ ಪಕ್ಷವು ಮಹಾರಾಷ್ಟ್ರ ಸರಕಾರಕ್ಕೆ ಬೆಂಬಲವನ್ನು ಹಿಂದೆಗೆದುಕೊಳ್ಳಲಿದೆ ಎಂದು ಹಲವಾರು ಬಾರಿ ಪ್ರಕಟಿಸಿರುವುದಕ್ಕಾಗಿ ಅವರ(ಉದ್ಧವ ಠಾಕ್ರೆ) ಪರವಾಗಿ ದಾಖಲೆಯನ್ನು ನೋಂದಾಯಿಸಲು ನಾವು ಬಯಸಿದ್ದೇವೆ ಎಂದು ರಾಣೆ ಗಿನ್ನೆಸ್ ವಿಶ್ವ ದಾಖಲೆಗಳ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ರಾಣೆ ಕಾಂಗ್ರೆಸ್‌ಗೆ ಸೇರುವ ಮುನ್ನ ಶಿವಸೇನೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆಯವರ ಪುತ್ರರಾಗಿದ್ದಾರೆ.
ರಾಣೆ ತನ್ನ ಪತ್ರದ ಪ್ರತಿಯನ್ನು ಬುಧವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, 24 ಗಂಟೆಗಳಲ್ಲಿ 450ಕ್ಕೂ ಅಧಿಕ ರಿಟ್ವೀಟ್ ಮತ್ತು 500 ಲೈಕ್‌ಗಳೊಂದಿಗೆ ಅದು ವೈರಲ್ ಆಗಿತ್ತು.
ನಿತೇಶ್(34) ರಾಜಕೀಯದಲ್ಲಿನ್ನೂ ಅಂಬೆಗಾಲಿಡುತ್ತಿರುವ ಶಿಶುವಾಗಿದ್ದಾರೆ. ಸ್ವಂತ ಸಾಮರ್ಥ್ಯವಿಲ್ಲದ ಅವರು ತನ್ನ ತಂದೆಯ ಹೆಸರಿನ ಬಲದಲ್ಲಿ ರಾಜಕೀಯದಲ್ಲಿದ್ದಾರೆ. ಸೇನೆಯು ಈಗಾಗಲೇ ಒಂದು ಗಿನ್ನೆಸ್ ವಿಶ್ವದಾಖಲೆಯನ್ನು ಹೊಂದಿದೆ ಮತ್ತು ಆ ಬಗ್ಗೆ ನಮಗೆ ಹೆಮ್ಮೆಯಿದೆ ಎನ್ನುವುದನ್ನು ಅವರ ಅರಿವಿಗೆ ತರಬೇಕಾಗಿದೆ ಎಂದು ಶಿವಸೇನೆಯ ವಕ್ತಾರೆ ಮನೀಷಾ ಕಾಯಂಡೆ ಹೇಳಿದರು. 2010ರಲ್ಲಿ ರಕ್ತದಾನ ಶಿಬಿರವೊಂದರಲ್ಲಿ ಒಂದೇ ದಿನದಲ್ಲಿ ಅತ್ಯಂತ ದೊಡ್ಡ ಪ್ರಮಾಣ(24,200 ಬಾಟ್ಲಿ)ದಲ್ಲಿ ರಕ್ತವನ್ನು ಸಂಗ್ರಹಿಸಿದ್ದಕ್ಕಾಗಿ ಶಿವಸೇನೆಯ ಹೆಸರು ಗಿನ್ನೆಸ್ ದಾಖಲೆಗಳಲ್ಲಿ ಸೇರಿದೆ.