×
Ad

ಉಡುಪಿ ಚೇಂಬರ್ ಆಪ್ ಕಾಮರ್ಸ್ ಕಟ್ಟಡ ಉದ್ಘಾಟನೆ

Update: 2017-06-15 20:04 IST

ಉಡುಪಿ, ಜೂ.15: ಉಡುಪಿ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಇಂದ್ರಾಳಿಯ ರೈಲ್ವೆ ಗೋಡೌನ್ ರಸ್ತೆಯಲ್ಲಿ ನಿರ್ಮಿಸಿದ ನೂತನ ಸ್ವಂತ ಕಟ್ಟಡ ‘ಚೇಂಬರ್ ಟವರ್ಸ್’ನ್ನು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಗುರುವಾರ ಉದ್ಘಾಟಿಸಿದರು.

ಉಡುಪಿ ಜಿಲ್ಲೆಯ ಜನತೆ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದ ನೆರವನ್ನು ಕಾಯುತ್ತಾ ಕೂರದೇ, ತಮ್ಮದೇ ಮೂಲಗಳಿಂದ ನಿಧಿ ಸಂಗ್ರಹಿಸಿ ತಾವು ಸಂಕಲ್ಪಸಿದ ಕಾರ್ಯವನ್ನು ಮಾಡುತ್ತಾರೆ ಎಂಬುದಕ್ಕೆ ಚೇಂಬರ್ ನಿರ್ಮಿಸಿದ ಈ ಕಟ್ಟಡವೇ ಉದಾಹರಣೆ. ಇದರಿಂದಾಗಿಯೇ ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿದೆ ಎಂದು ಪ್ರಮೋದ್ ತಿಳಿಸಿದರು.

ತಮ್ಮ ಶಾಸಕರ ನಿಧಿಯಿಂದ ಉಡುಪಿ ಚೇಂಬರ್ ಆಫ್ ಕಾಮರ್ಸ್‌ಗೆ 5 ಲಕ್ಷ ರೂ.ಗಳನ್ನು ನೀಡುವುದಾಗಿ ಸಚಿವ ಪ್ರಮೋದ್ ಇದೇ ಸಂದರ್ಭದಲ್ಲಿ ಘೋಷಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅದಾನಿ ಯುಪಿಸಿಎಲ್‌ನ ಕಾರ್ಯಕಾರಿ ನಿರ್ದೇಶಕ ಕಿಶೋರ್ ಆಳ್ವ ಅವರು, ಯುಪಿಸಿಎಲ್ ವತಿಯಿಂದ ಚೇಂಬರ್ ಆಫ್ ಕಾಮರ್ಸ್‌ಗೆ ಮುಂದಿನ 25 ವರ್ಷಗಳ ಕಾಲ ಪ್ರತಿ ವರ್ಷ ಒಂದು ಲಕ್ಷ ರೂ.ನೀಡುವುದಾಗಿ ಪ್ರಕಟಿಸಿದರು.

ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಶ್ರೀಕೃಷ್ಣ ರಾವ್ ಕೊಡಂಚ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ರಘುಪತಿ ಭಟ್, ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ವಿಜಯ ಮಂಚಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್, ಚೇಂಬರ್‌ನ ಕಾರ್ಯದರ್ಶಿ ಪಿ.ನಟರಾಜ್ ಪ್ರಭು, ರೇಖಾ ದೇವಾನಂದ್, ಅಂಡಾರು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಡಾ.ವಿಜಯೇಂದ್ರ ವಸಂತ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News