ಸಮಯಪ್ರಜ್ಞೆ ಮೆರೆದ ಯುವಕನಿಗೆ ರೈಲ್ವೆ ಇಲಾಖೆಯಿಂದ ಸನ್ಮಾನ
ಭಟ್ಕಳ, ಜೂ.15: ಚಿತ್ರಾಪುರ ಹಾಗೂ ಮುರ್ಡೇಶ್ವರದ ಮಧ್ಯ ಭಾಗದಲ್ಲಿ ಜೂ.8ರಂದು ರೈಲು ಹಳಿ ಬಿರುಕುಗೊಂಡ ಬಗ್ಗೆ ಮಾಹಿತಿ ನೀಡಿ ಆಗಬಹುದಾಗಿದ್ದ ಭಾರಿ ರೈಲು ಅಪಘಾತವನ್ನು ತಪ್ಪಿಸಿದ ತಾಲೂಕಿನ ಬೆಂಗ್ರೆಯ ಯುವಕ ಮೋಹನ ನಾಯ್ಕ ಎಂಬವರನ್ನು ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿ. ಕಾರವಾರದಿಂದ 10 ಸಾವಿರ ರೂ. ನಗದು ಬಹುಮಾನ ಸೇರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಜೂ. 8ರಂದು ಸಂಜೆ ಬೆಂಗ್ರೆಯ ಮೋಹನ ನಾಯ್ಕ ಗದ್ದೆ ಕೆಲಸಕ್ಕೆಂದು ರೈಲ್ವೆ ಹಳಿ ದಾಟಿ ತೆರಳುತ್ತಿದ್ದ ಸಂಧರ್ಭ ಚಿತ್ರಾಪುರ ಹಾಗೂ ಮುರ್ಡೇಶ್ವರ ಮಧ್ಯ ಭಾಗವೊಂದರಲ್ಲಿನ ರೈಲಿನ ಹಳಿ ಬಿರುಕುಗೊಂಡಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಶಿರಾಲಿಯ ಚಿತ್ರಾಪುರದ ನಿವಾಸಿ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪರಮೇಶ್ವರ ನಾಯ್ಕ ಎಂಬವರಿಗೆ ರೈಲು ಹಳಿ ಬಿರುಕುಗೊಂಡ ಬಗ್ಗೆ ಕರೆ ಮಾಡಿ ಮಾಹಿತಿ ನೀಡಿದರು.
ಈ ಸಂದರ್ಭ ಅದೇ ಮಾರ್ಗವಾಗಿ ಮಡಗಾಂವ್ - ಮಂಗಳೂರು ರೈಲು ಸಂಚರಿಸುತ್ತಿದ್ದು, ಅದೇ ರೈಲಿನಲ್ಲಿ ಟಿಕೆಟ್ ಕಲೆಕ್ಟರ್ ಪರಮೇಶ್ವರ ನಾಯ್ಕ ಸಂಚರಿಸುತ್ತಿದ್ದು, ಸಮಯಪ್ರಜ್ಞೆ ಮೆರೆದ ಟಿ.ಟಿ. ಪರಮೇಶ್ವರ ನಾಯ್ಕ ಮುರ್ಡೇಶ್ವರ ರೈಲ್ವೆ ವಿಭಾಗಕ್ಕೆ ಕರೆ ಮಾಡಿ ರೈಲನ್ನು ಚಿತ್ರಾಪುರದ ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ನಿಲ್ಲಿಸಿ ರೈಲ್ವೆ ಇಲಾಖಾ ಸಿಬ್ಬಂದಿಗಳು ಬಿರುಕುಗೊಂಡ ರೈಲು ಹಳಿಯನ್ನು ಸರಿಪಡಿಸಿ, ರೈಲು ಹಳಿ ಸಂಚಾರಕ್ಕೆ ಮುಕ್ತವಾದ ಬಳಿಕ ಮಡಗಾಂವ್ ಮಂಗಳೂರು ರೈಲು ಪ್ರಯಾಣ ಮುಂದುವರೆಸಿದರು.
ಸಮಯ ಪ್ರಜ್ಞೆ ಮೆರೆದ ಮೋಹನ ನಾಯ್ಕ ರನ್ನು ಗುರುವಾರ ಬೆಂಗ್ರೆ ಗ್ರಾಮ ಪಂಚಾಯತ್‌ನಲ್ಲಿ ಕಾರವಾರ ವಿಭಾಗದ ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿ.ನ ರಿಜನಲ್ ರೈಲ್ವೆ ಮ್ಯಾನೇಜರ್ ಎಮ್.ಡಿ. ಆಸೀಮ್ ಸುಲೈಮಾನ್ ಬೆಂಗ್ರೆಗೆ ಆಗಮಿಸಿ 10 ಸಾವಿರ ರೂ. ನಗದು ಬಹುಮಾನ ಸೇರಿ ಶಾಲು ಹೊದಿಸಿ ಗೌರವಿಸಿ ಪ್ರಶಸ್ತಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಮೋಹನ್ ನ ಹೆತ್ತವರು, ಸಂಬಂಧಿಕರು, ಬೆಂಗ್ರೆ ಗ್ರಾ.ಪಂ. ಅಧ್ಯಕ್ಷ ವೆಂಕ್ಟಯ್ಯ ಬೈರಮನೆ, ಪಂ. ಸದಸ್ಯರು ಸೇರಿದಂತೆ ಊರಿನವರು ಇದ್ದರು.