×
Ad

ಬೆಳ್ತಂಗಡಿ; ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ

Update: 2017-06-15 20:20 IST

 ಬೆಳ್ತಂಗಡಿ: ದ.ಕ. ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ಕೊಕ್ಕಡದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ  ಸಭೆಯನ್ನು ಕೊಕ್ಕಡದ ಅಂಬೇಡ್ಕರ್ ಭವನದಲ್ಲಿ ಗುರುವಾರದಂದು ನಡೆಸಲಾಯಿತು. ಸಭೆಯಲ್ಲಿ ಎಂಡೋ ಸಂತ್ರಸ್ಥರ ಸಮಸ್ಯೆಗಳ ಬಗ್ಗೆ  ಚರ್ಚೆ ನಡೆಸಲಾಯಿತು ಹಾಗೂ ಅವರಿಗೆ ಎಲ್ಲ ರೀತಿಯಲ್ಲಿ ನೆರವಾಗುವ ಬಗ್ಗೆ ಭರವಸೆಯನ್ನು ನೀಡಲಾಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಎಂಡೋ ಸಂತ್ರಸ್ಥರ ಕುರಿತಾಗಿ ವಿಶೇಷವಾಗಿ ಗಮನ ಹರಿಸಬೇಕಾಗಿದ್ದು, ಮಾನವೀಯ ನೆಲೆಯಲ್ಲಿ ಈ ಸಂತ್ರಸ್ಥರ ಎಲ್ಲಾ ಕೆಲಸ ಕಾರ್ಯಗಳನ್ನು ಯಾವೊಂದೂ ಅಡೆತಡೆಯಿಲ್ಲದೇ ಕ್ಷಿಪ್ರವಾಗಿ ನಡೆಸಿಕೊಡಬೇಕು ಎಂದರು.

ಅದರಂತೆ ಎಂಡೋ ಸಂತ್ರಸ್ಥರ ಹೋರಾಟಗಾರರ ಬಹುತೇಕ ಬೇಡಿಕೆಗಳಿಗೆ ಸಂಬಂದಪಟ್ಟ ಇಲಾಖೆಗಳಿಂದ ಸಂಪೂರ್ಣ ಮಾಹಿತಿಯೊಂದಿಗೆ ಸರಿಪಡಿಸುವ ಕಾರ್ಯವನ್ನು ಇಂದು ಸಮಗ್ರವಾಗಿ ನಡೆಸಿರುತ್ತೇನೆ. ಮತ್ತು ಬಾಕಿಯುಳಿದಂತೆ ಸರಕಾರದಿಂದ ಯಾವೆಲ್ಲಾ ಕಾರ್ಯಗಳು ನಡೆಯಬೇಕಾಗಿದೆಯೋ ಅಂತಹ ವಿವರಗಳನ್ನು ಸವಿವರವಾಗಿ ಆಯಾಯ ಇಲಾಖಾ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುತ್ತೇನೆ ಎಂದರು.
   
   ಪ್ರತಿಭಟನಾ ಸಭೆಯಲ್ಲಿ ಹೋರಾಟಗಾರರು ನೀಡಿದ್ದ 20 ಅಂಶಗಳ ಬೇಡಿಕೆಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವ್ಯಾಪ್ತಿಯಲ್ಲಿ ಸರಿಪಡಿಸಬಹುದಾದ ವಿಷಯಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಕಾರ್ಯಕ್ಕೆ ಆಯಾಯ ಇಲಾಖಾಧಿಕಾರಿಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಲಾಯಿತು.ಮತ್ತು ಈ ಬಗ್ಗೆ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿರುವ ಅನುಸರಣಾ ವರದಿಯನ್ನು ಸಭೆಗೆ ತಿಳಿಸಲಾಯಿತು. ಹಾಗೂ ಎಂಡೋ ಹೋರಾಟಗಾರರು ನೀಡಿದ್ದ ಬೇಡಿಕೆಗಳಲ್ಲಿ ಸರಕಾರ ಮಟ್ಟದಲ್ಲಿ ನಡೆಯಬಹುದಾದ ಕೆಲವು ಕಾರ್ಯಗಳನ್ನು ಸರಕಾರದ ಆಯಾಯ ಇಲಾಖಾ ಮುಖ್ಯ ಕಾರ್ಯದರ್ಶಿ ಯವರಿಗೆ ಮತ್ತು ಮುಖ್ಯಮಂತ್ರಿಯವರ ಮುಖ್ಯ ಕಾರ್ಯದರ್ಶಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಬರೆಯಲಾದ ಪತ್ರವನ್ನು ಸಭೆಯಲ್ಲಿ ಓದಿಹೇಳಲಾಯಿತು.
      

  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರವಿ , ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ರಾವ್ , ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅರುಣ್ ,ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ , ಪುತ್ತೂರು ಉಪವಿಭಾಗದ ಎಸಿ ರಘುನಂದನ್ ಮೂರ್ತಿ, ಕೆ ಎಸ್ ಆರ್ ಟಿಸಿ ಪುತ್ತೂರು ಉಪ ವಿಭಾಗದ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಲಿ, ಮಂಗಳೂರು ಉಪವಿಭಾಗದ ಎಸಿ , 43 ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು , ಬೆಳ್ತಂಗಡಿ, ಪುತ್ತೂರು , ಸುಳ್ಯ, ಮಂಗಳೂರು , ಬಂಟ್ವಾಳ ತಾಲೂಕುಗಳ ತಹಶೀಲ್ದಾರುಗಳವರು ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
  
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News