ಲಾರಿಯಲ್ಲೇ ಶವ ಪರೀಕ್ಷೆ: ರಾಜಸ್ತಾನದಲ್ಲಿ 30 ವರ್ಷಗಳಿಂದ ನಡೆದು ಬರುತ್ತಿರುವ ವಿಲಕ್ಷಣ ವಿದ್ಯಮಾನ

Update: 2017-06-15 15:00 GMT

 ಜೈಪುರ, ಜೂ.15: ಈ ಹಿಂದೊಮ್ಮೆ ನಡೆಸಿದ ಕಾರ್ಯಾಚರಣೆ ವೇಳೆ ಪೊಲೀಸರು ವಶಪಡಿಸಿಕೊಂಡಿದ್ದ ಹಳೆಯ ಲಾರಿಯಲ್ಲೇ ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಇದು ರಾಜಸ್ತಾನದ ರಾಜಧಾನಿ ಜೈಪುರದಲ್ಲಿರುವ ಬಾಸ್ಸಿ ಪೊಲೀಸ್ ಠಾಣೆಯಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ನಡೆದು ಬರುತ್ತಿರುವ ವಿದ್ಯಮಾನ.

  ಪೊಲೀಸ್ ಠಾಣೆಯ ಕಂಪೌಂಡ್‌ನ ಮಧ್ಯದಲ್ಲಿ ಈ ಲಾರಿಯನ್ನು ತಂದು ನಿಲ್ಲಿಸಿ ಮೂರು ದಶಕಗಳೇ ಕಳೆದಿವೆ.ಠಾಣೆಯ ಸಮೀಪ ಯಾವುದೇ ಶವಾಗಾರ ಇಲ್ಲದ ಕಾರಣ ತುರ್ತು ಮರಣೋತ್ತರ ಪರೀಕ್ಷೆಯನ್ನು ಈ ಲಾರಿಯಲ್ಲೇ ನಡೆಸಲಾಗುತ್ತದೆ. ಲಾರಿಯ ಮೇಲೆಲ್ಲಾ ತರಗೆಲೆ, ರಕ್ತದ ಕಲೆಗಳು, ಹರಿದ ಬಟ್ಟೆಯ ಚೂರುಗಳು ತುಂಬಿಕೊಂಡಿವೆ. ಕೆಲವು ಅಪರಿಚಿತ ಶವಗಳನ್ನು ಇಲ್ಲಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಎಸ್‌ಎಂಎಸ್ ಆಸ್ಪತ್ರೆಗೆ ರವಾನಿಸಿ ಅಲ್ಲಿ ಶವಪರೀಕ್ಷೆ ನಡೆಸಲಾಗುತ್ತದೆ ಎಂದು ಬಾಸ್ಸಿ ಠಾಣಾಧಿಕಾರಿ ವೀರೇಂದ್ರ ಸಿಂಗ್ ಹೇಳಿದ್ದಾರೆ.

  ಕೆಲವೊಮ್ಮೆ ಶವದ ಮರಣೋತ್ತರ ಪರೀಕ್ಷೆ ತ್ವರಿತವಾಗಿ ನಡೆಸಿ ಶವವನ್ನು ಅಂತಿಮ ಸಂಸ್ಕಾರಕ್ಕೆ ಬಿಟ್ಟುಕೊಡುವಂತೆ ಬಂಧುಗಳು ಒತ್ತಾಯಿಸುತ್ತಾರೆ. ಅಂತಹ ಸಂದರ್ಭದಲ್ಲಿ ಲಾರಿಯಲ್ಲೇ ಮರಣೋತ್ತರ ಪರೀಕ್ಷೆ ನಡೆಸಬೇಕಾಗುತ್ತದೆ. ಈ ಸಂದರ್ಭ ಪರಿಸರವಿಡೀ ವ್ಯಾಪಿಸುವ ದುರ್ವಾಸನೆಯಿಂದ ಠಾಣೆಯ ಸಮೀಪ ಇರುವ ಮನೆಯವರಿಗೆ ತೊಂದರೆಯಾಗುತ್ತದೆ ಎಂದು ಪೊಲೀಸರು ಹೇಳುತ್ತಾರೆ.

 ಮರಣೋತ್ತರ ಪರೀಕ್ಷೆಯನ್ನು ಮುಚ್ಚಿದ ಕೋಣೆಯೊಳಗಡೆ ನಡೆಸದೆ ತೆರೆದ ಲಾರಿಯಲ್ಲಿ ನಡೆಸಿದರೆ ದುರ್ವಾಸನೆ ಬಾಧಿಸುವುದು ಸಹಜ. ಈ ಹಿನ್ನೆಲೆಯಲ್ಲಿ ಇಲ್ಲಿರುವ ಸಮುದಾಯ ಆಸ್ಪತ್ರೆಯ ಕೋಣೆಯೊಂದನ್ನು ಮರಣೋತ್ತರ ಪರೀಕ್ಷೆಗಾಗಿ ಆರೋಗ್ಯ ಇಲಾಖೆ ಇದೀಗ ಸಜ್ಜುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News