ತೊಕ್ಕೊಟ್ಟು: ತೆಂಗು ಮರಗಳ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ
ಮಂಗಳೂರು, ಜೂ.15: ಕಪ್ಪು ತಲೆಹುಳ ಬಾಧೆಯಿಂದ ಅಳಿವಿನ ಅಂಚಿನಲ್ಲಿರುವ ತೆಂಗು ಮರಗಳ ರಕ್ಷಣೆ ಹಾಗು ರೈತರಿಗೆ ಧೈರ್ಯ ತುಂಬುವ ಸಲುವಾಗಿ ಕೃಷಿ ಇಲಾಖೆ ಗುರುವಾರ ಬೆಳೆಗಾರರ ಸಭೆಯನ್ನು ತೊಕ್ಕೊಟ್ಟಿನಲ್ಲಿ ನಡೆಸಿದೆ.
ಈ ಸಭೆಯಲ್ಲಿ ರೈತ ಸಂಘ (ಹಸಿರು ಸೇನೆ)ದ ಸಂಘಟನಾ ಕಾರ್ಯದರ್ಶಿ ಮನೋಹರ್ ಶೆಟ್ಟಿ ಮಾನಾಡಿ ಕೃಷಿ ಬಗ್ಗೆ ಜನಪ್ರತಿನಿಧಿಗಳೂ ನಿರುತ್ಸಾಹ ತೋರಿರುವುದರಿಂದ ಕೃಷಿ ಮಾಡಬೇಕೇ, ಬೇಡವೇ ಎನ್ನುವ ಸಂದಿಗ್ಧ ಸ್ಥಿತಿಯಲ್ಲಿ ಕೃಷಿಕರು ಇದ್ದಾರೆ. ಇದೀಗ ತೆಂಗಿನ ಮರಗಳಿಗೆ ಬಂದಿರುವ ರೋಗ ಕ್ಯಾನ್ಸರ್ ಮಾದರಿಯದ್ದಾಗಿದ್ದು, ನಿಯಂತ್ರಣ ಅಸಾಧ್ಯ. ಒಂದು ವೇಳೆ ರೋಗ ಹೋದರೂ ಕನಿಷ್ಟ ಎರಡು ವರ್ಷಗಳಾಗದೆ ಸಿಯಾಳ ಆಗದು. ಇಂತಹ ಸಂದರ್ಭ ಬೆಳೆಯನ್ನೇ ನಂಬಿದ ಕೃಷಿಕರಿಗೆ ಪುನಶ್ಚೇತನ ಯೋಜನೆಯಡಿ ಉಚಿತ ಸಸಿಗಳನ್ನು ಹಾಗೂ ಸತ್ತಿರುವ ತೆಂಗಿನ ಸರ್ವೇ ನಡೆಸಿ ಪರಿಹಾರ ನೀಡಬೇಕು, ತೆಂಗು ಪೈಲೆಟ್ ಮಾದರಿಯನ್ನೂ ಜಾರಿಗೆ ತರಬೇಕು ಎಂದರು.
ಗೋನಿಯಜಸ್ ನೆಫಂಟೈಡಿಸ್ ಎನ್ನುವ ಹುಳ ಬಿಟ್ಟ ಬಳಿಕ ರೋಗ ಉಲ್ಬಣಿಸಿದೆ. ಅಧಿಕಾರಿಗಳು ಸರ್ಕಾರದ ಸುತ್ತೋಲೆ ಪಾಲಿಸುವ ಅಧಿಕಾರ ಮಾತ್ರವಿದ್ದು, ಸಚಿವರು ಬೆಳೆಗಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಯಾವುದೂ ಅಸಾಧ್ಯವಲ್ಲ. ಸಾವಯವ ಔಷಧ ನೀಡುವ ಜೊತೆಗೆ ರೈತ ಸಂಪರ್ಕ ಸಭೆಯನ್ನೂ ನಡೆಸಬೇಕು. ಸರ್ಕಾರದ ಯೋಜನೆ ‘ಅಧಿಕಾರಿಗಳ ನಡೆ, ರೈತರ ಕಡೆ’ ಕೇವಲ ಗ್ರಾಪಂಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಮನೋಹರ ಶೆಟ್ಟಿ ಆರೋಪಿಸಿದರು.
ಕಪ್ಪುತಲೆ ಹುಳ ಎನ್ನುವ ರೋಗ ಕ್ಯಾನ್ಸರ್ ಮಾದರಿಯದ್ದಾಗಿದೆ ಎನ್ನುವ ಮನೋಹರ್ ಶೆಟ್ಟಿ ಅವರ ವಾದವನ್ನು ಅಧಿಕಾರಿಗಲು ಒಪ್ಪಿಕೊಂಡರು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸೀಮಾ ಮಾತನಾಡಿ, ರೋಗ ಯಾವ ರೀತಿ ವ್ಯಾಪಿಸಿದೆ ಎನ್ನುವ ಬಗ್ಗೆ ಇಂದಿಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದು ಕ್ಯಾನ್ಸರ್ ಮಾದರಿಯದ್ದಾಗಿದ್ದು, ಪ್ರಥಮ ಹಂತದಲ್ಲಿ ನಿಯಂತ್ರಿಸಲು ಸಾಧ್ಯವಿತ್ತು. ಉಳ್ಳಾಲವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಐದು ತೆಂಗು ಬೆಳೆದವರಿಗೂ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದರು.
ಬೆಳೆಗಾರರಾದ ಲೂವೀಸ್ ಡಿಸೋಜ ಮಾತನಾಡಿದರು. ಸಭೆಯನ್ನು ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಉದ್ಘಾಟಿಸಿದರು. ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ತಾಪಂ ಸದಸ್ಯೆ ಸುರೇಖ ಚಂದ್ರಹಾಸ್ ಉಪಸ್ಥಿತರಿದ್ದರು. ಬೆಳೆಗಾರರಾದ ಲೂವೀಸ್ ಡಿಸೋಜ, ರೆವರೆಂಡ್ ಡಿಸೋಜ, ದಿನಕರ್ ಉಳ್ಳಾಲ್ ಅನಿಸಿಕೆ ವ್ಯಕ್ತಪಡಿಸಿದರು. ಕಾಸರಗೋಡು ಸಿಪಿಸಿಆರ್‌ನ ಅಧಿಕಾರಿ ಪ್ರತಿಮಾ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಏನಿದು ರೋಗ?: ಐದು ತಿಂಗಳಿಂದ ತೊಕ್ಕೊಟ್ಟು-ಕಲ್ಲಾಪು ಸಮೀಪದ ಆಡಂಕುದ್ರುವಿನಲ್ಲಿ ತೆಂಗಿನ ಮರಗಳಿಗೆ ಕಾಣಿಸಿಕೊಂಡ ತಲೆಹುಳ ಬಾಧೆ ಎನ್ನುವ ರೋಗಕ್ಕೆ ತೆಂಗಿನ ಮರಗಳು ಒಣಗಲು ಆರಂಭಿಸಿದ್ದವು. ಅದನ್ನು ಕಂಡ ಕಾಸರಗೋಡು ಸಿಪಿಸಿಆರ್ ಅಧಿಕಾರಿಗಳ ಸೂಚನೆ ಮೇರೆಗೆ ಹುಳಗಳ ಹತೋಟಿ ನಿಟ್ಟಿನಲ್ಲಿ ಕುದ್ರುವಿನಲ್ಲಿ ಗೋನಿಯಜಸ್ ನೆಫಂಟೈಡಿಸ್ ಎನ್ನುವ ಹುಳವನ್ನು ಬಿಡಲಾಗಿತ್ತು. ಈ ಮಧ್ಯೆ ತಲಪಾಡಿ, ಉಳ್ಳಾಲ ಹಾಗೂ ಕುತ್ತಾರ್‌ವರೆಗೂ ಈ ರೋಗ ವ್ಯಾಪಿಸಿದ್ದರಿಂದ ಹಲವಾರು ಮರಗಳು ಒಣಗಿ ಬೆಳೆಗಾರರು ಕಂಗಾಲಾಗಿದ್ದರು.