ಜಿಎಸ್‌ಟಿ ಜಾರಿಯಾಗಲಿರುವ ಹಿನ್ನೆಲೆ ಗ್ರಾಹಕರಿಗೆ ಭಾರೀ ರಿಯಾಯಿತಿಯ ಕೊಡುಗೆ

Update: 2017-06-15 15:03 GMT

ಹೊಸದಿಲ್ಲಿ, ಜೂ.15: ಜುಲೈ ತಿಂಗಳಿನಿಂದ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಅದಕ್ಕೂ ಮೊದಲು ತಮ್ಮಲ್ಲಿರುವ ಸರಕುಗಳನ್ನು ಖಾಲಿ ಮಾಡಲು ಮುಂದಾಗಿರುವ ಹಲವು ಸಂಸ್ಥೆಗಳು ಗ್ರಾಹಕರಿಗೆ ಭಾರೀ ರಿಯಾಯಿತಿಯ ಕೊಡುಗೆಯನ್ನು ಘೋಷಿಸಿವೆ.

 ಪೇಟಿಎಂ ಸಂಸ್ಥೆ ‘ಜಿಎಸ್‌ಟಿ ಪೂರ್ವ ಮಾರಾಟ ಮೇಳ’ ಘೋಷಿಸಿದ್ದು ಸುಮಾರು 500 ಉತ್ಪನ್ನಗಳನ್ನು 6,000 ಚಿಲ್ಲರೆ ವ್ಯಾಪಾರಿಗಳ (ರಿಟೇಲರ್) ಮೂಲಕ ಮಾರಾಟ ಮಾಡುತ್ತಿದೆ. ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು, ಎಸಿ, ರೆಫ್ರಿಜರೇಟರ್, ಪಾದರಕ್ಷೆ ಮುಂತಾದವುಗಳು ಇದರಲ್ಲಿ ಸೇರಿವೆ.

   ಆನ್‌ಲೈನ್ ಮೂಲಕ ಔಷಧ ವಸ್ತುಗಳನ್ನು ಮಾರಾಟ ಮಾಡುತ್ತಿರುವ 1ಎಂಜಿ ಡಾಟ್ ಕಾಮ್ ಸಂಸ್ಥೆಯೂ ಇದೇ ಹಾದಿಯಲ್ಲಿ ಸಾಗಿದೆ. ಜಿಎಸ್‌ಟಿಯ ಕಾರಣ ಜುಲೈ ತಿಂಗಳಲ್ಲಿ ಔಷಧ ವಸ್ತುಗಳ ಕೊರತೆ ಎದುರಾಗಬಹುದು. ಆದ್ದರಿಂದ 1ಎಂಜಿ ಡಾಟ್ ಕಾಮ್ ಮೂಲಕ ಶೇ.20ರ ರಿಯಾಯಿತಿ ಬೆಲೆಯಲ್ಲಿ ಔಷಧ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂದು ಗ್ರಾಹಕರಿಗೆ ಸಂದೇಶ ರವಾನಿಸಿದೆ.

   ಸುಮಾರು ಐದು ಲಕ್ಷ ಗ್ರಾಹಕರನ್ನು ಹೊಂದಿರುವ ‘ಶಾಪ್‌ಕ್ಲೂಸ್’ ವಿವಿಧ ನಗರಗಳಲ್ಲಿ ಮಾರಾಟಗಾರರ ಸಮ್ಮೇಳನಗಳನ್ನು ಆಯೋಜಿಸಿರುವುದಾಗಿ ಪ್ರಕಟಿಸಿದೆ. ಅಲ್ಲದೆ ಜಿಎಸ್‌ಟಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ತನ್ನ ಮಾರಾಟ ಜಾಲ ಮುಖಪುಟದಲ್ಲಿ ಪ್ರಕಟಿಸಿರುವುದಾಗಿ ತಿಳಿಸಿದೆ.

     ಕ್ರೀಡಾದಿರಿಸು ಉತ್ಪನ್ನ ಮಾರಾಟ ಸಂಸ್ಥೆ ‘ಪ್ಯುಮಾ’ ತನ್ನ ಈ ಹಿಂದಿನ ರಿಯಾಯಿತಿಯಾದ ಶೇ.40ಕ್ಕೆ ಹೆಚ್ಚುವರಿಯಾಗಿ ಶೇ.10 ರಿಯಾಯಿತಿಯ ಕೊಡುಗೆ ಪ್ರಕಟಿಸಿದರೆ, ಬಟ್ಟೆಬರೆ ಉತ್ಪಾದಿಸುವ ಸಂಸ್ಥೆ ‘ಅಲೆನ್ ಸೋಲಿ’ ತನ್ನ ಗ್ರಾಹಕರಿಗೆ ‘ಒಂದು ಕೊಂಡರೆ ಒಂದು ಉಚಿತ’ ಕೊಡುಗೆ ಪ್ರಕಟಿಸಿದೆ. ‘ಲೆವಿಸ್’ನ ಎರಡು ಬಟ್ಟೆ ಕೊಂಡರೆ ಎರಡು ಬಟ್ಟೆ ಉಚಿತವಾಗಿ ದೊರೆಯುತ್ತದೆ. ಬಟ್ಟೆ ಬರೆ ಸಂಸ್ಥೆ ‘ಫ್ಲೈಯಿಂಗ್ ಮೆಷಿನ್’ ಶೇ.50ರಷ್ಟು ರಿಯಾಯಿತಿ ಘೋಷಿಸಿದೆ.

 ಅಲ್ಲದೆ, ಬಜಾಜ್ ಆಟೋ ಸಂಸ್ಥೆ ‘ ಜಿಎಸ್‌ಟಿಯ ನಿರೀಕ್ಷಿತ ಲಾಭ’ವನ್ನು ಗ್ರಾಹಕರಿಗೆ ವರ್ಗಾಯಿಸುವ ಯೋಜನೆಯಾಗಿ ಮೋಟಾರ್ ಸೈಕಲ್‌ಗಳ ಮೇಲೆ 4,500 ರೂ.ವರೆಗೆ ರಿಯಾಯಿತಿ ಘೋಷಿಸಿದೆ. ಜು.1ರ ಬಳಿಕ ಬಹುತೇಕ ನಗರಗಳಲ್ಲಿ ಮೋಟಾರ್‌ಸೈಕಲ್ ಮೇಲೆ ಕಡಿಮೆ ತೆರಿಗೆ ವಿಧಿಸಲಾಗುತ್ತದೆ ಎಂದು ಸಂಸ್ಥೆ ಪ್ರಕಟಿಸಿದೆ.

   ಇ-ಮಾರಾಟ ಸಂಸ್ಥೆಗಳು ನೂತನ ತೆರಿಗೆ ವ್ಯವಸ್ಥೆಯಡಿ ತಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸಲು ವೇದಿಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ವರ್ತಕರೊಂದಿಗೆ ನಿಕಟ ಸಂಪರ್ಕದಲ್ಲಿವೆ. ಜಿಎಸ್‌ಟಿ ರಾಷ್ಟ್ರದಾದ್ಯಂತ ಜುಲೈ 1ರಿಂದ ಜಾರಿಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News