ಸೂಕ್ತ ಯೋಜನೆಗಳಿಲ್ಲದೆ ಸಾರ್ವಜನಿಕರಿಂದ ಹಣ ಸ್ವೀಕಾರ: ರಾಜಸ್ಥಾನ ಗೃಹಮಂಡಳಿಗೆ ರಾ.ಗ್ರಾಹಕ ಆಯೋಗದ ತರಾಟೆ

Update: 2017-06-15 15:04 GMT

ಹೊಸದಿಲ್ಲಿ,ಜೂ.15: ಸಕಾಲದಲ್ಲಿ ಹಂಚಿಕೆ ಮಾಡಬಹುದಾದ ವಸತಿ ಯೋಜನೆಗಳು ಸಿದ್ಧವಿಲ್ಲದೆ ಸಾರ್ವಜನಿಕರಿಂದ ಹಣವನ್ನು ಸ್ವೀಕರಿಸಲು ಸರಕಾರಿ ಸಂಸ್ಥೆಗಳಿಗೆ ಯಾವುದೇ ಹಕ್ಕುಗಳಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಹೇಳಿದೆ.

 ರಾಜಸ್ಥಾನದ ನಿವಾಸಿ ಸಂತೋಷಕುಮಾರ್ ಹಕೀಂ ಎನ್ನುವವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ರಾಜಸ್ಥಾನ ಗೃಹ ಮಂಡಳಿಯು 1979 ಮತ್ತು 2007ರಲ್ಲಿ ತಾನು ರೂಪಿಸಿದ್ದ ವಸತಿ ಯೋಜನೆಗಳಡಿ ಅವರಿಗೆ ಎರಡು ಬಾರಿ ಮನೆಗಳನ್ನು ಹಂಚಿಕೆ ಮಾಡಿತ್ತಾದರೂ ಬಳಿಕ ಅದನ್ನು ರದ್ದು ಗೊಳಿಸಿತ್ತು.

2008ರಲ್ಲಿ ‘ತಪ್ಪಿನಿಂದಾಗಿ ’ದೂರುದಾರರಿಗೆ ಎರಡನೆಯ ಹಂಚಿಕೆ ಪತ್ರವನ್ನು ನೀಡಲಾಗಿತ್ತು ಎಂಬ ಮಂಡಳಿಯ ವಾದವನ್ನು ‘ಅದಕ್ಷತೆಯ ಪರಾಕಾಷ್ಠೆ ’ಎಂದು ಬಣ್ಣಿಸಿದ ಆಯೋಗದ ಅಧ್ಯಕ್ಷ ಬಿ.ಸಿ.ಗುಪ್ತಾ ನೇತೃತ್ವದ ಪೀಠವು, ಮಂಡಳಿಯು ತನ್ನ ಸ್ವಂತದ ದಾಖಲೆಗಳನ್ನ್ನೂ ಸರಿಯಾಗಿ ಕಾಯ್ದುಕೊಳ್ಳಲು ಸಮರ್ಥವಿಲ್ಲ. ತಮ್ಮ ಕಷ್ಟದ ಸಂಪಾದನೆಯನ್ನು ಮಂಡಳಿಗೆ ಒಪ್ಪಿಸಿ ದಶಕಗಳ ಕಾಲ ಮನೆಗಾಗಿ ಕಾಯುವ ಅಮಾಯಕ ಸಾರ್ವಜನಿಕರ ಹಿತಾಸಕ್ತಿಯನ್ನು ರಕ್ಷಿಸುವ ಸಾಮರ್ಥ್ಯವೂ ಅದಕ್ಕೆ ಇಲ್ಲ ಎಂದು ತರಾಟೆ ಗೆತ್ತಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News