ಎಂಡೋ ಸಂತ್ರಸ್ತರಿಗೆ ಆದ್ಯತೆಯಲ್ಲಿ ಸೌಲಭ್ಯಗಳ ಮಂಜೂರು: ಡಿಸಿ ಸೂಚನೆ
ಮಂಗಳೂರು, ಜೂ.15: ಎಂಡೋಸಲ್ಫಾನ್ ಸಂತ್ರಸ್ತರಿಗೆ ಮತ್ತು ಅವರ ಕುಟುಂಬದವರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಆದ್ಯತೆಯಲ್ಲಿ ಮಂಜೂರುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಕಾರ್ಯ ನಿರ್ವಾಹಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರದ ವಿವಿಧ ಇಲಾಖೆಗಳಡಿ ಎಂಡೋ ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರು ವಿವಿಧ ಫಲಾನುಭ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದರೆ, ಅವರಿಗೆ ತ್ವರಿತಗತಿಯಲ್ಲಿ ಮಂಜೂರು ಮಾಡಬೇಕು. ಅಗತ್ಯ ಬಿದ್ದರೆ ನಿಯಮಗಳ ಸರಳೀಕರಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಎಂಡೋ ಸಂತ್ರಸ್ತರ ಸೌಲಭ್ಯಗಳ ಮಂಜೂರಾತಿಯಲ್ಲಿ ವಿನಾಕಾರಣ ವಿಳಂಭಿಸಿದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಅರ್ಹ ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ಅವರಿಗೆ ಗುರುತಿನ ಚೀಟಿ ಮತ್ತು ಸ್ಮಾರ್ಟ್ ಕಾರ್ಡ್ ನೀಡಿಕೆ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಆಗಸ್ಟ್ ಅಂತ್ಯದೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಎಂಡೋ ಸಂತ್ರಸ್ತರು ಚಿಕಿತ್ಸೆ ಪಡೆದಿದ್ದರೆ ಆ ವೆಚ್ಚವನ್ನು ಆಸ್ಪತ್ರೆಗಳಿಗೆ ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಎಂಡೋ ಸಂತ್ರಸ್ತರ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ನೀಡಲಾಗುವುದು. ಇದಲ್ಲದೆ ಶಿಕ್ಷಣ ಇಲಾಖೆ ವತಿಯಿಂದ ಅರ್ಹ ಎಂಡೋಪೀಡಿತ ಮಕ್ಕಳ ಮನೆಗೆ ತೆರಳಿ ವಿದ್ಯಾಭ್ಯಾಸ ನೀಡಲಾಗುವುದು. ಇದಲ್ಲದೆ ಅರ್ಹರಿಗೆ ಮನೆ ನಿವೇಶನ ನೀಡಲು ಸರಕಾರಿ ಜಾಗವನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲು ತಹಶೀಲ್ದಾರ್‌ಗಳಿಗೆ ಸೂಚಿಸಿದ ಅವರು, ವಸತಿ ಯೋಜನೆಯಡಿ ಮನೆ ನಿರ್ಮಾಣ ಹಾಗೂ ಶೌಚಾಲಯಗಳನ್ನು ಆಯಾ ಗ್ರಾಪಂಗಳು ಆದ್ಯತೆಯಲ್ಲಿ ನೀಡಲು ಹೇಳಿದರು.
ಎಂಡೋ ಸಂತ್ರಸ್ತರ ಬ್ಯಾಂಕ್ ಖಾತೆಗೆ ಮಾಸಿಕ ಪಿಂಚಣಿ ಜಮಾ ಆಗುವುದರಲ್ಲಿ ವಿಳಂಬವಾಗುವುದುನ್ನು ತಪ್ಪಿಸಲು ಮಂಗಳೂರಿನಲ್ಲಿ ಖಜಾನೆ ಮತ್ತು ವಿವಿಧ ಬ್ಯಾಂಕುಗಳ ಸಭೆ ನಡೆಸಲಾಗುವುದು. ಹಳೆ ಪಿಂಚಣಿ ಬಾಕಿ ಇದ್ದವರಿಗೆ ಈಗಾಗಲೇ ಬಾಕಿ ಪಾವತಿಸಲಾಗಿದೆ. ಅರ್ಹರಿಗೆ ಪಿಂಚಣಿ ದೊರಕಿಸುವುದು ಸರಕಾರದ ಉದ್ದೇಶವಾಗಿದೆ. ಅನರ್ಹರಿಗೆ ಎಂಡೋಸಲ್ಫಾನ್ ಸಂತ್ರಸ್ತರ ಪಿಂಚಣಿ ಮಂಜೂರಾಗಿರುವ ಬಗ್ಗೆ ದೂರುಗಳು ಬಂದರೆ ಅಂತಹ ಪಿಂಚಣಿಯನ್ನು ತಡೆ ಹಿಡಿಯಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರಸ್ತುತ ಇರುವ ‘ಡೇ ಕೇರ್ ಸೆಂಟರ್’ಗಳಲ್ಲಿ ಪೂರ್ಣ ಪ್ರಮಾಣದ ಫಿಸಿಯೋಥೆರಫಿ ಘಟಕಗಳನ್ನು ವಾರದ 6 ದಿನಗಳಲ್ಲೂ ಕಾರ್ಯಾಚರಿಸಲಾಗುವುದು. ಡೇ ಕೇರ್ ಸೆಂಟರ್‌ಗಳ ಉಸ್ತುವಾರಿಗೆ ಸಮಿತಿಯನ್ನು ರಚಿಸಲಾಗುವುದು. ಎಂಡೋಸಲ್ಫಾನ್ ಸಂತ್ರಸ್ತರ ಬೇಡಿಕೆಗಳ ಬಗ್ಗೆ ಉನ್ನತ ಮಟ್ಟದ ಸಭೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ದ.ಕ.ಜಿಪಂ ಸಿಇಒ ಡಾ.ಎಂ.ಆರ್.ರವಿ, ಪುತ್ತೂರು ಎಸಿ ಡಾ.ರಘುನಂದನ ಮೂರ್ತಿ, ಮಂಗಳೂರು ಎಸಿ ರೇಣುಕಾ ಪ್ರಸಾದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಡಾ. ಅರುಣ್‌ಕುಮಾರ್, ಕೊಕ್ಕಡ ಗ್ರಾಪಂ ಅಧ್ಯಕ್ಷ ಸೆಬಾಸ್ಟಿಯನ್, ಎಂಡೋ ಹೋರಾಟಗಾರರ ಸಮಿತಿಯ ಪೀರ್ ಮುಹಮ್ಮದ್ ಸಾಹೇಬ್, ಎಂಡೋ ಸಂತ್ರಸ್ತ ಕುಟುಂಬಗಳ ಸದಸ್ಯರು ಭಾಗವಹಿಸಿದ್ದರು.