ನೇತ್ರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ವಶ
ಮಂಗಳೂರು, ಜೂ.15: ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬ ಬಸ್ ನಿಂದ ನೇತ್ರಾವತಿ ಸೇತುವೆ ಸಮೀಪ ಇಳಿದು ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿ ಘಟನೆ ಗುರುವಾರ ಸಂಜೆ ನಡೆದಿದೆ.
ಇದನ್ನು ಕಂಡ ವಾಹನ ಸವಾರರು ವ್ಯಕ್ತಿಯನ್ನು ಹಿಡಿದು ಕಟ್ಟಿ ಹಾಕಿ 108 ಆ್ಯಂಬುಲೆನ್ಸ್‌ನ ಒಳಗೆ ಹಾಕಿದ್ದು, ಈ ವೇಳೆ ತಕರಾರು ಮಾಡಿದ ಆ್ಯಂಬುಲೆನ್‌ನ ಸಿಬ್ಬಂದಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ತೊಕ್ಕೊಟ್ಟಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ನಿಂದ ಉಳ್ಳಾಲ ನೇತ್ರಾವತಿ ನದಿ ಸೇತುವೆಯಲ್ಲಿ ಇಳಿದ ಮಾನಸಿಕ ವ್ಯಕ್ತಿಯೋರ್ವ ಸೇತುವೆಯ ಮಧ್ಯದಲ್ಲಿದ್ದ ಹೈಮಾಸ್ಕ್ ಕಂಬವೇರಿದ್ದು, ಇದನ್ನು ಕಂಡ ಸಾರ್ವಜನಿಕರು ಉಪಾಯದಿಂದ ಕೆಳಗಿಳಿಸಿದ್ದಾರೆ. ನಂತರವೂ ವ್ಯಕ್ತಿಯ ಅವಾಂತರ ಮುಂದುವರಿಯಿತು. ಅಂದರೆ ಚಲಿಸುತ್ತಿದ್ದ ವಾಹನಗಳ ಅಡಿಗೆ ಬೀಳಲು ಯತ್ನಿಸಿದ್ದಲ್ಲದೆ, ನದಿ ನೀರಿಗೆ ಜಿಗಿಯಲು ಯತ್ನಿಸಿದ. ಬಳಿಕ ಸಾರ್ವಜನಿಕರು ಸೇರಿ ಹಗ್ಗದಿಂದ ಕಟ್ಟಿ ಅಂಬ್ಯುಲೆನ್ಸ್‌ಗೆ ಹಾಕಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಮಾನಸಿಕ ವ್ಯಕ್ತಿಯ ಅವಾಂತರ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಬರಲು ತಿಳಿಸಿದ್ದು ವಾಹನ ಕರ್ತವ್ಯದಲ್ಲಿ ಹೊರ ಹೋಗಿರುವುದಾಗಿ ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಮಂಗಳೂರಿಗೆ ತೆರಳುತ್ತಿದ್ದ ಮತ್ತೊಂದು 108 ಆ್ಯಂಬುಲೆನ್ಸನ್ನು ಸಾರ್ವಜನಿಕರು ನಿಲ್ಲಿಸಿ ಅದರೊಳಗೆ ಅಸ್ವಸ್ಥಗೊಂಡ ವ್ಯಕ್ತಿಯನ್ನು ತುಂಬಿಸುವಾಗ ಇದಕ್ಕೆ ಅದರ ಸಿಬ್ಬಂದಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆರಳಿದ ಸಾರ್ವಜನಿಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದು ಮಾನಸಿಕ ಅಸ್ವಸ್ಥನನ್ನು ಅದೇ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆಯಿಂದ ರಾ.ಹೆ. 66ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು ಉಳ್ಳಾಲ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.