×
Ad

ಭಟ್ಕಳ: ಸನ್ಮಾನ ಕಾರ್ಯಕ್ರಮ

Update: 2017-06-15 21:33 IST
ಭಟ್ಕಳ,ಜೂ.15: ಸರಕಾರಿ ಇಲಾಖೆಯಲ್ಲಿ ವರ್ಗಾವಣೆ ಸಾಮಾನ್ಯ ಆದರೂ ಸಹ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗುತ್ತಿರುವವರನ್ನು ಅತ್ಯಂತ ಆತ್ಮೀಯತೆಯಿಂದ ಬೀಳ್ಕೊಡುತ್ತಿರುವುದು ಅತ್ಯಂತ ಸಂತಸದಾಯಕ ಕ್ಷಣ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಹೇಳಿದರು.

ಅವರು ಇಲ್ಲಿನ ಪೊಲೀಸ್ ವಸತಿ ಸಮುಚ್ಛಯದಲ್ಲಿಯರುವ ಗಣೇಶೋತ್ಸವ ಮಂಟಪದಲ್ಲಿ ಭಟ್ಕಳ ನಗರ ಠಾಣೆಯಿಂದ ವರ್ಗಾವಣೆಯಾಗಿ ಬೇರೆಡೆಗೆ ಹೋಗುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಬೀಳ್ಕೊಡುಗೆ, ಸಾಮಾಜಿಕವಾಗಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

ಇತ್ತೀಚಿನ ವರ್ಷಗಳಿಲ್ಲಿ ಪೊಲೀಸ್ ಇಲಾಖೆಗೆ ಪಿ.ಸಿ.ಗಳಾಗಿ ಬರುವವರು ಪದವಿ, ಸ್ನಾತಕೋತ್ತರ ಪದವಿ ಅಲ್ಲದೇ ಕೆಲವರು ಇಂಜಿನಿಯರಿಂಗ್ ಹಾಗೂ ತತ್ಸಮಾನ ಪದವಿಯನ್ನು ಪಡೆದವರು ಕೂಡಾ ಬರುತ್ತಿದ್ದಾರೆ. ಅಂತವರು ಬಹಳ ಉತ್ಸುಕತೆಯಿಂದ ಕೆಲಸ ಮಾಡುವುದರಿಂದ ಇಲಾಖೆಗೆ ಉತ್ತಮ ಹೆಸರು ಬರುತ್ತಿದೆ. ಅತ್ಯಂತ ಹೆಚ್ಚು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದರೂ ಕೂಡಾ ಪೊಲೀಸ್ ಇಲಾಖೆಯಲ್ಲಿ ತಮ್ಮ ಕರ್ತವ್ಯವನ್ನು ಒತ್ತಡದಲ್ಲಿಯೂ ನಿಭಾಯಿಸಿಕೊಂಡು ಹೋಗುವಂತಹ ಸಿಬ್ಬಂದಿಗಳು ಇರುವುದರಿಂದ ಇಲಾಖೆ ಉತ್ತಮ ಹೆಸರು ಗಳಿಸಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವೃತ್ತ ನಿರೀಕ್ಷಕ ಸುರೇಶ ನಾಯಕ, ಪೊಲೀಸ್ ಎನ್ನುವುದು ಒಂದು ಕುಟುಂಬ ಇದ್ದಂತೆ. ಇಲಾಖೆಯಲ್ಲಿ ನಾವೆಲ್ಲೂ ಒಂದೇ ಆಗಿದ್ದು, ನಮಗೆ ಅಲ್ಲಿ ಕರ್ತವ್ಯ ಮಾತ್ರ ಕಾಣುತ್ತದೆ. ಇಲಾಖೆಯಲ್ಲಿ ಕೆಳಗಿನ ಸಿಬ್ಬಂದಿಗಳು ಉತ್ತಮ ಕೆಲಸ ಮಾಡಿದಾಗ ಮಾತ್ರ ಇಲಾಖೆಗೆ, ಹಿರಿಯ ಅಧಿಕಾರಿಗಳಿಗೆ ಉತ್ತಮ ಹೆಸರು ಬರುತ್ತದೆ. ಭಟ್ಕಳ ನಗರ ಠಾಣೆಯಲ್ಲಿ ಕೆಲಸ ಮಾಡುವವರು ಸದಾ ಒತ್ತಡದಲ್ಲಿಯೇ ಇರಬೇಕಾಗುತ್ತದೆ. ಅದರಲ್ಲಿಯೂ ಎಸ್. ಬಿ. ಸಿಬ್ಬಂದಿಗಳಿಗೆ ಪಾಸ್‌ಪೋರ್ಟ ಕೆಲಸದ್ದೇ ಒತ್ತಡ ಹೆಚ್ಚಿರುತ್ತದೆ. ಆದರೂ ಸಹ ಅತ್ಯಂತ ಉತ್ತಮ ಕೆಲಸ ಮಾಡುತ್ತಿದ್ದು, ಇಲಾಖೆಗೆ ಸಹಕಾರಿಯಾಗಿದೆ. ವರ್ಗಾವಣೆಯಾಗಿ ಹೋಗುತ್ತಿರುವವರೂ ಕೂಡಾ ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿ ಹೋಗುತ್ತಿದ್ದು ಮುಂದೆಯೂ ಸಹ ಕರ್ತವ್ಯದಲ್ಲಿ ನಿಷ್ಟೆಯನ್ನು ತೋರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ವರ್ಗಾವಣೆಯಾಗಿ ಹೋಗುತ್ತಿರುವ ಬಸವರಾಜ ನಾಯ್ಕ, ನಾರಾಯಣ ಗುನಗಿ, ಗಜಾನನ ನಾರ್ವೆಕರ್, ಶ್ರೀಧರ ನಾಯ್ಕ, ನಾಗೇಂದ್ರ ದೇವಾಡಿಗ ಹಾಗೂ ಮೃದುಲಾ ಅವರುಗಳನ್ನು ಗೌರವಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಅಣ್ಣಪ್ಪ ಮೊಗೇರ, ಪರಮೇಶ್ವರಪ್ಪ ಸೇಠ್‌ಸನದಿ, ಸರಕಾರಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಪುಟ್ಟರಾಜು ಉಪಸ್ಥಿತರಿದ್ದರು. ಕುಮಾರಿ ಶ್ರೇಯಾ ಮತ್ತು ಪ್ರತೀಕ್ಷಾ ಪ್ರಾರ್ಥಿಸಿದರು. ರಮೇಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸುರೇಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News