×
Ad

ಭಟ್ಕಳ: ಉದ್ಯೋಗ ಮೇಳ

Update: 2017-06-15 21:38 IST

ಭಟ್ಕಳ: ಸರಕಾರ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿಯಲ್ಲಿ ಉದ್ಯೋಗ ಮೇಳ ಏರ್ಪಡಿಸಿರುವುದರಿಂದ ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ ಅನುಕೂಲವಾಗಿದೆ ಎಂದು ತಾಲೂಕಾ ಪಂಚಾಯತ್ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಹೇಳಿದರು.

ಅವರು ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಮತ್ತು ತಾಲೂಕಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿಯಲ್ಲಿ ತಾಲೂಕಿನ ಗ್ರಾಮೀಣ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಶಿರಾಲಿಯ ಜನತಾ ಮಹಾವಿದ್ಯಾಲಯದಲ್ಲಿ ಎರ್ಪಡಿಸಲಾಗಿದ್ದ ಆಪ್ತ ಸಮಾಲೋಚನೆ ಹಾಗೂ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಸ್ತುತ ಅನೇಕ ವಿದ್ಯಾವಂತರು ಸರಿಯಾದ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಸರಕಾರದ ಉಪಯುಕ್ತವಾದ ಈ ಯೋಜನೆಯ ಸದುಪಯೋಗವನ್ನು ನಿರುದ್ಯೋಗಿ ಯುವಕರು ಮತ್ತು ಯುವತಿಯರು ಪಡೆದು ಉದ್ಯೋಗ ಪಡೆಯುವಂತಾಗಬೇಕು ಎಂದೂ ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆರ್.ಜಿ ನಾಯ್ಕ ಮಾತನಾಡಿ, ಈ ಹಿಂದೆ ಹಲವು ಕಡೆ ಉದ್ಯೋಗ ಮೇಳ ನಡೆದಿದೆ. ಆದರೆ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ದೊರಕಿದ್ದು ಮಾತ್ರ ವಿರಳ. ಇದಕ್ಕೆ ಕಾರಣ ಅಂತಹ ಉದ್ಯೋಗ ಮೇಳದಲ್ಲಿ ಪ್ರತಿಭಾವಂತರಿಗೆ ಮಾತ್ರ ಉದ್ಯೋಗ ದೊರೆಯುವುದು ಸಾಧ್ಯವಾಗಿತ್ತು. ಆದರೆ ಈಗ ನಡೆಸುತ್ತಿರುವ ಆಪ್ತ ಸಮಾಲೋಚನೆ ಹಾಗೂ ಉದ್ಯೋಗ ಮೇಳ ಹಿಂದೆ ನಡೆದಿರುವ ಉದ್ಯೋಗ ಮೇಳದಂತೆ ನಡೆಯುತ್ತಿಲ್ಲ. ಇಲ್ಲಿ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಅನೇಕ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಯುವಕ, ಯುವತಿಯರ ಕೌಶಲ್ಯವನ್ನು ಉನ್ನತೀಕರಿಸಿ ಅವರಿಗೆ ಉದ್ಯೋಗವನ್ನು ನೀಡುವುದು ಕೇಂದ್ರ ಸರಕಾರದ ಯೋಜನೆಯಾಗಿದೆ ಎಂದರು.

ಉದ್ಯೋಗ ಬಯಸುವ ಯುವಕ, ಯುವತಿಯರು ಮೊದಲು ತಮ್ಮ ಜೀವನ ಶೈಲಿಯನ್ನು ಬದಲಾಯಿಸಕೊಳ್ಳಬೇಕಾಗುತ್ತದೆ. ಚೌಕಟ್ಟಿನಲ್ಲಿ ಬದುಕುವ ಮನೋಭಾವವನ್ನು ಬಿಟ್ಟು ಉದ್ಯೋಗವನ್ನು ಮಾಡುವ ಮನೋಭಾವನೆ ಹೊಂದಿದರೆ ಮಾತ್ರ ಇಲ್ಲಿ ಅವಕಾಶವನ್ನು ಪಡೆಯಲು ಸಾಧ್ಯ ಎಂದರು.

ವೇದಿಕೆಯಲ್ಲಿ ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೇಶ ನಾಯ್ಕ, ತಾ.ಪಂ. ಸದಸ್ಯೆ ಮಾಲತಿ ಮೋಹನ ದೇವಾಡಿಗ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ. ಟಿ. ನಾಯ್ಕ, ಜನತಾ ವಿದ್ಯಾಲಯದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಜೆ. ಕಾಮತ್, ಸಂಜೀವಿನಿ ಸಂಸ್ಥೆಯ ಸಂಚಾಲಕ ಗೋಪಾಲ್ ನಾಯ್ಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶಾರದಾ ನಾಯ್ಕ ಮುಂತಾದವರಿದ್ದರು. ಮೇಳದಲ್ಲಿ ಐದು ನೂರಕ್ಕೂ ಅಧಿಕ ಉದ್ಯೋಗ ಆಕಾಕ್ಷಿಗಳು ಭಾಗವಹಿಸಿದ್ದರು. ಉದ್ಯೋಗ ಮೇಳದಲ್ಲಿ ಕೆಫೆ ಕಾಫಿ ಡೇ ಸಂಸ್ಥೆಯಿಂದ 52, ಟಿಂ ಲೀಸ್ ನಿಂದ 48, ನ್ಯಾಷನಲ್ ಅಕಾಡೆಮಿ ಪೋರ್ ಸ್ಕಿಲ್ ಡೆವಲಪ್ ಮೆಂಟ್ 33, ಸಿಂಡ ಆರ್ ಸಿಟಿ 95, ಇತರೆ ಸಂಸ್ಥೆಯಿಂದ 228 ಅಭ್ಯರ್ಥಿಗಳನ್ನು ಕೌಶಲ್ಯಾಭಿವೃದ್ದಿ ತರಬೇತಿಗೆ ನೋಂದಾಯಿಸಿ ಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News