‘ನೀಟ್’ ಪರೀಕ್ಷೆ: ಉತ್ತರ ಪರಿಶೀಲನೆಗೆ ಅವಕಾಶ
ಮುಂಬೈ, ಜೂ.15: ‘ನೀಟ್’ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳ ‘ಆನ್ಸರ್ ಕೀ’ (ಉತ್ತರ)ಯನ್ನು ಸಿಬಿಎಸ್‌ಇ ಪ್ರಕಟಿಸಿದ್ದು ಇದನ್ನು ಪರಿಶೀಲಿಸಿ ವಿದ್ಯಾರ್ಥಿಗಳು ಅಂಕಗಳ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಜೂನ್ 15ರಿಂದ ಜೂನ್ 16ರವರೆಗೆ ಅವಕಾಶವಿದೆ.
‘ನೀಟ್’ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ‘ಆನ್ಸರ್ ಕೀ’ಯೊಂದಿಗೆ ತಾವು ಬರೆದಿರುವ ಉತ್ತರವನ್ನು ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳು ಅಂಕದ ಬಗ್ಗೆ ಅರ್ಜಿ ಸಲ್ಲಿಸಬಹುದು.
‘ನೀಟ್’ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುವ ಯಾವುದೇ ಸಾಧ್ಯತೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದ ಬಳಿಕ ಸಿಬಿಎಸ್‌ಇ ಈ ಪ್ರಕಟಣೆ ನೀಡಿದೆ. ಮೇ 7ರಂದು ನಡೆದಿದ್ದ ‘ನೀಟ್’ ಪರೀಕ್ಷೆಯಲ್ಲಿ ಆಂಗ್ಲಮಾಧ್ಯಮದಲ್ಲಿ ಪರೀಕ್ಷೆ ಬರೆದ ಮತ್ತು ಇತರ ಮಾತೃಭಾಷೆಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆ ಒದಗಿಸಿದ್ದ ಬಗ್ಗೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದರು.
ಇತರ ರಾಷ್ಟ್ರೀಯ ಅಥವಾ ರಾಜ್ಯ ಪರೀಕ್ಷಾ ವ್ಯವಸ್ಥೆಯಲ್ಲಿ , ಒಂದು ವಿದ್ಯಾರ್ಥಿ ಸಲ್ಲಿಸಿದ ಅಂಕ ಮರುಪರಿಶೀಲನಾ ಅರ್ಜಿ ಪುರಸ್ಕೃತಗೊಂಡರೆ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಅಂಕ ನೀಡಲಾಗುತ್ತದೆ. ಆದರೆ ಸಿಬಿಎಸ್‌ಇ ಪರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಮಾತ್ರ ಅಂಕ ನೀಡಲಾಗುತ್ತದೆ . ಇದು ಸರಿಯಲ್ಲ ಎಂದು ಪರೀಕ್ಷೆ ಬರೆದಿರುವ ಅಮೃತ ರೆಗೆ ಎಂಬ ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾರೆ. ಅಂಕದ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಒಂದು ವಿಷಯಕ್ಕೆ 1,000 ರೂ. ಶುಲ್ಕ ತೆರಬೇಕು. ಒಂದು ವೇಳೆ ವಿದ್ಯಾರ್ಥಿಗಳ ಉತ್ತರ ಸರಿಯಾಗಿದ್ದರೆ ಈ ಶುಲ್ಕ ವಾಪಸು ಮಾಡಲಾಗುತ್ತದೆ.