ಪುತ್ತೂರು: ‘ಜನಸೇವಾ ಕೇಂದ್ರ’ ಆರಂಭ
ಪುತ್ತೂರು,ಜೂ.16 : ಸಮಾಜ ಸೇವೆಯ ಉದ್ದೇಶಗಳೊಂದಿಗೆ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಆರಂಭಿಸಿರುವ ‘ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್’ನ ಜನಸೇವಾ ಕೇಂದ್ರ ಪುತ್ತೂರಿನ ದರ್ಬೆಯಲ್ಲಿರುವ ಆರ್.ಇ.ಬಿ. ಎನ್‌ಕ್ಲೇವ್‌ನಲ್ಲಿ ಶನಿವಾರ ಆರಂಭಗೊಳ್ಳಲಿದೆ ಎಂದು ಸಂಘಟಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದ್ದಾರೆ.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಿಯಲ್ ಎಸ್ಟೇಟ್ ಉದ್ಯಮಿ ಅಶೋಕ್ ಕುಮಾರ್ ರೈ ಅವರು ಈ ಟ್ರಸ್ಟ್‌ನ ಪ್ರವರ್ತಕರಾಗಿ ಜನಸೇವಾ ಕೇಂದ್ರದ ಮೂಲಕ ಹಲವು ಸೇವೆಗಳನ್ನು ಆರಂಭಿಸಿದ್ದು, ಈ ಸೇವಾ ಕೇಂದ್ರದ ವಿದ್ಯುಕ್ತ ಉದ್ಘಾಟನೆ ಶನಿವಾರ ಬೆಳಿಗ್ಗೆ ನಡೆಯುವುದು, ಸಂಸದ ನಳೀನ್ ಕುಮಾರ್ ಕಟೀಲ್ ಅವರು ಉದ್ಘಾಟಿಸುವರು.
ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅತಿಥಿಯಾಗಿ ಭಾಗವಹಿಸುವರು. ವರ್ಷಂಪ್ರತಿ ದೀಪಾವಳಿಯಂದು ಸಾವಿರಾರು ಮಂದಿಗೆ ವಸ್ತ್ರ ವಿತರಣೆ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಎಚ್‌ಐವಿ ಪೀಡಿತ ಮಕ್ಕಳ ಮಕ್ಕಳ ಆರೈಕೆಯ ಆಶ್ರಮಕ್ಕೆ ದೇಣಿಗೆ, ಅನಾರೋಗ್ಯ ಪೀಡಿತರ ಮತ್ತು ಅಫಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ನೆರವು, ನಿರ್ಗತಿಕ ಬಡ ಮತ್ತು ಅಸಕ್ತ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಜೊತೆಗೆ ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆಯ ಕೊಡುಗೆ, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು, ದೇವಾಲಯಗಳ ಅಭಿವೃದ್ಧಿಗೆ ದೇಣಿಗೆ, ಬಡವರ ಮನೆ ದುರಸ್ತಿಗೆ ಆರ್ಥಿಕ ಸಹಾಯ, ವಿದ್ಯುತ್ ಸೌಲಭ್ಯ ವಂಚಿತ ಮನೆಗೆಳಿಗೆ ವಿದ್ಯುತ್ ಸಂಪರ್ಕದ ಸೇವೆ ಮೊದಲಾದ ಸೇವಾ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಅಶೋಕ್ ಕುಮಾರ್ ರೈ ಅವರು ತನ್ನ ಸೇವಾ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಇದೀಗ ಟ್ರಸ್ಟ್‌ನ ಜನಸೇವಾ ಕೇಂದ್ರ ಆರಂಭಿಸಿದ್ದಾರೆ.
ಕಟ್ಟಡ ಹಾಗೂ ಇತರ ನಿರ್ಮಾಣಗಾರ ಕಾರ್ಮಿಕರ ನೋಂದಾವಣೆ, ಉಚಿತ ಶೌಚಾಲಯ ವ್ಯವಸ್ಥೆ (ಸ್ವಚ್ಛ ಭಾರತ್), ಬೀಡಿ ಕಾರ್ಮಿಕರ ಪಿಂಚಣಿ ಯೋಜನೆ (ಜೀವನ್ ಪ್ರಮಾಣ್), ಪಾನ್ ಕಾರ್ಡ್, ಆಧಾರ್ ಕಾರ್ಡ್ ನೋಂದಾವಣೆ, ಬ್ಯಾಂಕು ಉಳಿತಾಯ ಖಾತೆ, ಜನನ-ಮರಣ ಪ್ರಮಾಣ ಪತ್ರ, ಪ್ರಧಾನಮಂತ್ರಿ ಆವಾಜ್ ಯೋಜನೆ, ಪಾಸ್‌ಪೋರ್ಟ್, ನಿರ್ಗತಿಕರ ವಿಧವಾ ವೇತನ, ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ ಯೋಜನೆ ಮೊದಲಾದ ಸರ್ಕಾರಿ ಸವಲತ್ತುಗಳನ್ನು ಅರ್ಹರಿಗೆ ಒದಗಿಸಿಕೊಡುವ ಸೇವೆ ಮುಂದಕ್ಕೆ ಈ ಜನಸೇವಾ ಕೇಂದ್ರದ ಮೂಲಕ ಜನತೆಗೆ ಉಚಿತವಾಗಿ ಲಭ್ಯವಾಗಲಿದೆ.
ಈ ಉಚಿತ ಸೇವೆಗಳು ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯವರಿಗೆ ಮಾತ್ರ ಸದ್ಯಕ್ಕೆ ಸೀಮಿತವಾಗಿರುತ್ತದೆ. ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪದವಿ ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ಪಾಸ್ ವ್ಯವಸ್ಥೆ ಮಾಡಿಕೊಡಲಾಗುವುದು. ನಿರುದ್ಯೋಗಿಗಳಿಗೆ ಸ್ವದ್ಯೋಗ ನಡೆಸಲು ಪೂರಕವಾಗುವ ನಿಟ್ಟಿನಲ್ಲಿ ಉಚಿತವಾಗಿ ವಾಹನ ಚಾಲನಾ ತರಬೇತಿ ನೀಡಿ ಅವರಿಗೆ ಉಚಿತವಾಗಿಯೇ ಲೈಸನ್ಸ್ ಮಾಡಿಕೊಡಲಾಗುವುದು. ಉಚಿತವಾಗಿ ಹೊಲಿಗೆ ತರಬೇತಿಯನ್ನು ನೀಡಿ ಅವರು ಸ್ವದ್ಯೋಗ ಮಾಡುವ ಮೂಲಕ ಸ್ವಾವಲಂಬಿಗಳಾಗುವಂತೆ ಪ್ರೇರೇಪಿಸಲಾಗುವುದು.
ಸರ್ಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಇಲ್ಲದ ಕಾರಣದಿಂದಲೇ ಹಲವಾರು ಮಂದಿ ಸವಲತ್ತುಗಳಿಂದ ವಂಚಿತರಾಗುತ್ತಿದ್ದು ,ಅಂಥವರಿಗೆ ಸಹಾಯವಾಗುವ ಉದ್ದೇಶದಿಂದ ಈ ಸೇವಾ ಕೇಂದ್ರ ಆರಂಭಿಸಲಾಗಿದೆ ಎಂದು ಅಶೋಕ್ ಕುಮಾರ್ ರೈ ಅವರು ತಿಳಿಸಿದ್ದಾರೆ.