ಸರ್ಟಿಫಿಕೇಟ್ ನೀಡುವ ಮೊದಲ ಜ್ಯುವೆಲ್ಲರಿ ತರಬೇತಿ ಸಂಸ್ಥೆ: ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಉಡುಪಿ, ಜೂ.16: ದೇಶದ ಮೊತ್ತಮೊದಲ ಸರ್ಟಿಫಿಕೇಟ್ ನೀಡುವ ರತ್ನ ಮತ್ತು ಚಿನ್ನಾಭರಣ ತರಬೇತಿ ಸಂಸ್ಥೆಗೆ ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು ಉಡುಪಿಯಲ್ಲಿ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಚಿನ್ನಾಭರಣ ತಯಾರಿಗೆ ತರಬೇತಿ ನೀಡುವ ಸಂಸ್ಥೆಗಳು ಉತ್ತರ ಭಾರತದ ಮುಂಬಯಿ, ಸೂರತ್, ಜೈಪುರ, ದಿಲ್ಲಿ ಹಾಗೂ ವಾರಣಸಿಗಳಲ್ಲಿ ಈಗಾಗಲೇ ಕಾರ್ಯಾಚರಿಸುತಿದ್ದರೂ ಅವು ಯಾವುದೂ ತರಬೇತಿಗೆ ಸರ್ಟಿಫಿಕೇಟ್‌ಗಳನ್ನು ನೀಡುತ್ತಿಲ್ಲ. ಆದರೆ ಉಡುಪಿಯಲ್ಲಿ ಅಹಮದಾಬಾದ್‌ನ ನೇಷನಲ್ ಇನ್‌ಸ್ಟಿಟೂಟ್ ಆಫ್ ಡಿಸೈನ್ (ಎನ್‌ಐಡಿ) ಸಹಭಾಗಿತ್ವದಲ್ಲಿ ನಡೆಯುವ ಈ ಸಂಸ್ಥೆ ತನ್ನಲ್ಲಿ ತರಬೇತಿ ಪಡೆದವರಿಗೆ ಸರ್ಟಿಫಿಕೇಟ್‌ಗಳನ್ನು ನೀಡಲಿದ್ದು, ಇದರಿಂದ ಅವರು ತಕ್ಷಣವೇ ದೇಶದ ಯಾವುದೇ ಭಾಗದಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ ಎಂದು ಸಚಿವೆ ನುಡಿದರು.
ಸದ್ಯಕ್ಕೆ ಬಾಡಿಗೆಯ ಕಟ್ಟಡದಲ್ಲಿ ಈ ಸಂಸ್ಥೆ ಮುಂದಿನ ನವೆಂಬರ್ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ. ಈಗ ಅಲ್ಲಿ 10 ಹಾಗೂ 9 ವಾರಗಳ ಒಟ್ಟು ನಾಲ್ಕು ಕೋರ್ಸ್‌ಗಳಿರುತ್ತವೆ. ದೇಶದ ತಜ್ಞರು ಇಲ್ಲಿ ತರಬೇತಿಗಳನ್ನು ನೀಡಲಿದ್ದು, ಕಾರ್ಯಾಗಾರಗಳನ್ನೂ ನಡೆಸಲಾಗುತ್ತದೆ ಎಂದರು.
ಮೊದಲ ಹಂತದಲ್ಲಿ ಚಿನ್ನಾಭರಣ ತಯಾರಿಕೆಗೆ ತರಬೇತಿ ನೀಡಿದರೆ, ಎರಡನೇ ಹಂತದಲ್ಲಿ ಚಿನ್ನಾಭರಣಗಳನ್ನು ಇಲ್ಲೇ ತಯಾರಿಸಲಾಗುವುದು. ಮೂರನೇ ಹಂತದಲ್ಲಿ ಇಲ್ಲಿ ತಯಾರಾದ ಉತ್ಕೃಷ್ಟ ಗುಣಮಟ್ಟದ, ವಿನ್ಯಾಸದ ಚಿನ್ನಾಭರಣಗಳನ್ನು ವಿದೇಶಗಳಿಗೂ ರಫ್ತು ಮಾಡಲಾಗುವುದು ಎಂದು ಸಚಿವೆ ವಿವರಿಸಿದರು.
ಎಸೆಸೆಲ್ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ಚಿನ್ನಾಭರಣ ತಯಾರಿಯಲ್ಲಿ ಆಸಕ್ತಿ ಹೊಂದಿರುವ ಯುವಕ-ಯುವತಿಯರು, ಸಾಂಪ್ರದಾಯಿಕ ಚಿನ್ನದ ಕೆಲಸಗಾರರು, ಈಗಾಗಲೇ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಈ ತರಬೇತಿ ಪಡೆಯಬಹುದಾಗಿದೆ. ಎನ್‌ಐಡಿ ನೀಡುವ ಸರ್ಟಿಫಿಕೇಟ್ ಪಡೆದ ತರಬೇತುದಾರನಿಗೆ ತಕ್ಷಣ ಉದ್ಯೋಗವೂ ಖಾತ್ರಿಯಾಗಿರುತ್ತದೆ ಎಂದವರು ಭರವಸೆ ನೀಡಿದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಚಿನ್ನಾಭರಣ ತಯಾರಿಯಲ್ಲಿ ಅತ್ಯಂತ ನಿಪುಣ ಕುಶಲಕರ್ಮಿಗಳನ್ನು ಹೊಂದಿದ್ದು, ಈ ತರಬೇತಿ ಸಂಸ್ಥೆಯ ಮೂಲಕ ಅವರು ತಮ್ಮ ಸಾಂಪ್ರದಾಯಿಕ ಜ್ಞಾನವನ್ನು ಆಧುನೀಕರಣಗೊಳಿಸಿ ಜಾಗತಿಕ ಮಟ್ಟದ ಚಿನ್ನಾಭರಣಗಳನ್ನು ತಯಾರಿಸುವ ಸಾಮರ್ಥ್ಯ ಪಡೆಯುವ ವಿಶ್ವಾಸ ತಮಗಿದೆ. ಈ ಸಂಸ್ಥೆಯಿಂದ ಇಲ್ಲಿನ ಕುಶಲಕರ್ಮಿಗಳಿಗೆ ಉದ್ಯೋಗದ ಸುವರ್ಣ ಬಾಗಿಲು ತೆರೆಯಲಿದೆ ಎಂದು ತಾವು ಭಾವಿಸುವುದಾಗಿ ನುಡಿದರು.
ಸಮಾರಂಭದಲ್ಲಿ ಉಡುಪಿ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಜಿಜೆಇಪಿಸಿಯ ಅಧ್ಯಕ್ಷ ಪ್ರವೀಣ್‌ಶಂಕರ್ ಪಾಂಡ್ಯ, ಸಂಯೋಜಕ ಕೆ.ಶ್ರೀನಿವಾಸನ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಜಂಟಿ ನಿರ್ದೇಶಕ ಮನೋಜ್ ದ್ವಿವೇದಿ, ಉಡುಪಿ ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಎ.ನಾಗರಾಜ ಆಚಾರ್ಯ, ಸಂಸ್ಥೆಯ ದಕ್ಷಿಣ ಭಾರತ ಅಧ್ಯಕ್ಷ ಮಹೇಂದರ್ ತಯಾಲ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಪ್ರಮುಖ ಆಭರಣ ತಯಾರಕರು ಹಾಗೂ ಮಾರಾಟಗಾರರಾದ ಜಯ ಎ.ಸುವರ್ಣ, ನಾಗರಾಜ ಆಚಾರ್ಯ, ರಾಜಶೇಖರ ಆಚಾರ್ಯ, ಸುಂದರ ಆಚಾರ್ಯ, ಗುಜ್ಜಾಡಿ ರಾಮದಾಸ ನಾಯಕ್, ಸುಭಾಸ್ ಕಾಮತ್ ಮುಂತಾದವರನ್ನು ಸಚಿವರು ಸನ್ಮಾನಿಸಿದರು.