ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರ: ಪ್ರೊ. ಎಸ್ ಎನ್ ಶ್ರೀಧರ್
ಕೊಣಾಜೆ, ಜೂ. 16: ಭಾರತವು ವಿವಿಧ ಭಾಷೆ, ಧರ್ಮ, ಸಂಸ್ಕೃತಿ, ಜನಾಂಗವನ್ನು ಒಳಗೊಂಡ ದೇಶವಾಗಿದ್ದರೂ ವೈವಿದ್ಯತೆಯಲ್ಲಿ ಏಕತೆಯನ್ನು ಕಂಡಂತಹ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವದ ನೈಜವಾದ ಸ್ವಭಾವವೇ ಬಹುಭಾಷಿಕತೆಯಾಗಿದೆ ಎಂದು ಅಮೆರಿಕದ ನ್ಯೂಯಾರ್ಕ್ ಸ್ಟೋನಿ ಬ್ರೂಕ್ ವಿಶ್ವವಿದ್ಯಾನಿಲಯದ ಭಾರತ ಅಧ್ಯಯನ ವಿಭಾಗದ ನಿದೇಶರ್ಕರಾದ ಹಿರಿಯ ಭಾಷಾ ವಿಜ್ಞಾನಿ ಪ್ರೊ. ಎಸ್ ಎನ್ ಶ್ರೀಧರ್ ಅವರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದ ಮೈಕ್ರೊಟ್ರಾನ್ ಸಭಾಂಗಣದಲ್ಲಿ ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅನುದಾನದೊಂದಿಗೆ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಎರಡು ವಾರಗಳ ಕಾಲ ಬಹುಭಾಷಿಕತೆ ಸಮಾಜಿಕ ಸಾಂಸ್ಕೃತಿಕ ಮತ್ತು ಸಾಹಿತಿಕ ಆಯಾಮಗಳು' ಎಂಬ ವಿಷಯದಲ್ಲಿ ಆಯೋಜಿಸಲಾಗಿದ್ದ ‘ಗ್ಯಾನ್’(GIAN) ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತ ರಾಷ್ಟ್ರದ ಬೆಳವಣಿಗೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನಡೆದ ಕ್ರಾಂತಿಕಾರಿ ಬೆಳವಣಿಗೆಗಳು ಬಹಳ ಪ್ರಮುಖವಾದವುಗಳಾಗಿವೆ. ಇವುಗಳಲ್ಲಿ ಸಾಮಾಜಿಕ ಕ್ಷೇತ್ರದ ಕ್ರಾಂತಿಕಾರಿ ಬೆಳವಣಿಗೆಯಲ್ಲಿ ವಿಭಿನ್ನ ಭಾಷೆ, ಸಂಸ್ಕೃತಿ, ಧರ್ಮ ಸೇರಿದಂತೆ ವೈವಿಧ್ಯತೆಗಳ ನಡುವೆಯೂ ಬಹುತ್ವದ ನೆಲೆಯ ಕಲ್ಪನೆಯಡಿಯಲ್ಲಿ ಭಾರತವು ಯಶಸ್ವಿಯ ಹೆಜ್ಜೆಯನ್ನಿಟ್ಟಿದೆ. ಭಾರತೀಯ ಭಾಷೆ ಮತ್ತು ಸಂಸ್ಕೃತಿಗಳ ಬಹುತ್ವವನ್ನು ಅರ್ಥಮಾಡಿಕೊಳ್ಳುವುದಕ್ಕೆ ನಮ್ಮದೇ ಮಾನದಂಡಗಳನ್ನು ಹಾಗೂ ತಾತ್ವಿಕ ಚೌಕಟ್ಟುಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಆ ಮೂಲಕ, ಒಂದು ಬಹುಭಾಷಿಕ ಸಮಾಜವಾಗಿ ನಮ್ಮ ಮುಂದಿರುವ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಒಂದು ವಿಮರ್ಶಾತ್ಮಕ ದೃಷ್ಠಿಕೋನದ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ಎಂ. ಲೋಕೇಶ್ ಅವರು, ಭಾರತವು ಬಹು ಸಂಸ್ಕೃತಿಯ ರಾಷ್ಟ್ರ ಮಾತ್ರವಲ್ಲ ಬಹು ಭಾಷಿಕತೆಯನ್ನು ಒಳಗೊಂಡ ದೇಶವೂ ಹೌದು. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬಹು ಭಾಷಿಕತೆಯ ಚಿಂತನೆ ಸಮಗ್ರವಾಗಿ ರೂಪಿತವಾಗಿದೆ. ಪಾಕಿಸ್ತಾನದಂತಹ ದೇಶದಲ್ಲಿ ಎಷ್ಟೋ ಭಾಷೆಗಳು ಇಂದು ಅಳಿದುಹೋಗಿವೆ ಎಂದು ಹೇಳಿದರು.
ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ ಸೋಮಣ್ಣ, ಗ್ಯಾನ್ ಕಾರ್ಯಕ್ರಮದ ಸಂಯೋಜಕ ಪ್ರೊ.ಗಣೇಶ್ ಸಂಜೀವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ಯಾನ್ ಕಾರ್ಯಕ್ರಮದ ಸಂಚಾಲಕ, ಪ್ರಾಧ್ಯಾಪಕರಾದ ಪ್ರೊ. ಬಿ. ಶಿವರಾಮ ಶೆಟ್ಟಿ ಸ್ವಾತಿಸಿದರು. ಕಾರ್ಯಾಗಾರದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದ ಪಂಜಾಬ್‌ನ ಹೀರಾ ಇರ್ಷಾದ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಪಂಜಾಬ್, ತ್ರಿಪುರ. ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.