ಲಂಡನ್ ಅಗ್ನಿ ದುರಂತ: ಸಾವಿನ ಸಂಖ್ಯೆ 30ಕ್ಕೆ
ಲಂಡನ್, ಜೂ.16: ಲಂಡನ್‌ನ ಗ್ರೆನ್‌ಫೆಲ್ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಕನಿಷ್ಠ 30 ಜನ ಮೃತಪಟ್ಟಿರುವುದು ದೃಢಪಟ್ಟಿದ್ದು, ಇನ್ನೂ ಸುಮಾರು 12 ಮಂದಿ ಪ್ರಾಣ ಕಳೆದುಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಅನಾಹುತ ಸಂಭವಿಸಿದ ಎರಡು ದಿನಗಳ ಬಳಿಕ ಬೆಂಕಿಯನ್ನು ಸಂಪೂರ್ಣ ನಿಯಂತ್ರಿಸಲಾಗಿದೆ.
ಬೆಂಕಿ ದುರಂತಕ್ಕೆ ಕನಿಷ್ಠ 30 ಮಂದಿ ಬಲಿಯಾಗಿದ್ದಾರೆ ಹಾಗೂ ಸತ್ತವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಪೊಲೀಸ್ ಮುಖ್ಯಸ್ಥ ಸ್ಟುವರ್ಟ್ ಕಂಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆ ಆರಂಭವಾಗಿದ್ದು, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂಬುದನ್ನು ದೃಢಪಡಿಸುವ ಯಾವುದೇ ಅಂಶ ದೊರೆತಿಲ್ಲ ಎಂದವರು ತಿಳಿಸಿದರು. ಗಾಯಗೊಂಡ 24 ಜನರ ಪೈಕಿ 12 ಜನರ ದೇಹಸ್ಥಿತಿ ಗಂಭೀರವಾಗಿದೆ. ಡ್ರೋನ್ ಮತ್ತು ಶ್ವಾನದಳದ ನೆರವು ಪಡೆದು ಅಗ್ನಿಶಾಮಕ ದಳ ಕಟ್ಟಡದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿದೆ.
ಕಟ್ಟಡದ ಸ್ಥಿರತೆಯ ಕುರಿತು ಸಂದೇಹವಿರುವ ಕಾರಣ 24 ಮಹಡಿಯ ಈ ಕಟ್ಟಡದ ಕೆಲವು ಅಂತಸ್ತುಗಳಲ್ಲಿ ಶೋಧ ಕಾರ್ಯಾಚರಣೆ ಸಾಧ್ಯವಾಗಿಲ್ಲ. ಕಾಣೆಯಾಗಿರುವ ತಮ್ಮ ಸಂಬಂಧಿಗಳ ಫೋಟೋಗಳನ್ನು ಕಟ್ಟಡದ ಸಮೀಪ ಅಂಟಿಸಿರುವ ಜನರು ಅವರು ಸುರಕ್ಷಿತವಾಗಿರಲೆಂದು ಹಾರೈಸುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ. ರಾಣಿ ಎಲಿಝಬೆತ್ ಮತ್ತು ಅವರ ಮೊಮ್ಮಗ ರಾಜಕುಮಾರ ವಿಲಿಯಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ದುರಂತದ ಬಗ್ಗೆ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸರಕಾರ ಆದೇಶ ನೀಡಿದೆ. ಎಲ್ಲೋ ಗಂಭೀರ ಲೋಪವಾಗಿದೆ ಎಂದು ಸಮುದಾಯ ಮತ್ತು ಸ್ಥಳೀಯಾಡಳಿತ ಸಚಿವ ಸಾಜಿದ್ ಜಾವೇದ್ ಬಿಬಿಸಿಗೆ ತಿಳಿಸಿದ್ದಾರೆ.