ಮರ ಕಡಿಯುತ್ತಿದ್ದ ವ್ಯಕ್ತಿಗೆ ಗುಂಡು ಹಾರಿಸಿದ ಪ್ರಕರಣ: ಪರಿಹಾರಕ್ಕೆ ಒತ್ತಾಯ
ಕಾರ್ಕಳ, ಜೂ. 16: ಕಡ್ತಲ ಪಾಲ್ಜೆಡ್ಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಶಿಕಾರಿ ಬಂದವರು ಹಾರಿಸಿದ ಗುಂಡಿಗೆ ಮರಕಡಿಯುತ್ತಿದ್ದ ರವೀಂದ್ರ ನಾಯ್ಕ ಬಲಿಯಾದ ಅಮಾಯಕನಾಗಿದ್ದಾನೆ. ಟಿಂಬರ್ ಮಾಫಿಯಾಗಳು ಆತನನ್ನು ಕೂಲಿ ಕೆಲಸಕ್ಕೆ ಕರೆದೊಯ್ದು ಇಂತಹ ಕೃತ್ಯಕ್ಕೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಕುಟುಂಬಕ್ಕೆ ಆಧಾರ ಸಂಭವಾಗಿ ಆತ ಮೃತಪಟ್ಟ ಬಳಿಕ ಕುಟುಂಬ ಅಸಹಾಯಕವಾಗಿದೆ. ಸರಕಾರದಿಂದ ಆತನ ಕುಟುಂಬಕ್ಕೆ ನೆರವು ನೀಡುವಂತೆ ತಾಲೂಕು ಪಂಚಾಯತ್ ಸದಸ್ಯೆ ಸುಲತಾ ಒತ್ತಾಯಿಸಿದರು.
ತಾಲೂಕು ಪಂಚಾಯತ್‌ನ ಉಣ್ಣಿಕೃಷ್ಣನ್ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ.ಜೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ ಮೃತ ವ್ಯಕ್ತಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದು, ಮೃತನ ತಂದೆ ಅಜೆಕಾರು ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದರು. ಅದಕ್ಕೆ ಧ್ವನಿಗೂಡಿಸಿದ ಅಜೆಕಾರು ತಾಲೂಕು ಪಂಚಾಯತ್ ಸದಸ್ಯ ಹರೀಶ್ ನಾಯಕ್, ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಮಾತನಾಡಿ ಮೃತವ್ಯಕ್ತಿ ಜ್ವರದಿಂದ ಬಳಲುತ್ತಿದ್ದರು. ಟಿಂಬರ್ ಮಾಫಿಯಾಗಳು ಆತನ ಮನೆಯಿಂದ ಒತ್ತಾಯವಾಗಿ ಕರೆದೊಯ್ದು ಕೊಲೆಯಾಗುವಂತೆ ಮಾಡಿದ್ದಾರೆ. ಪೊಲೀಸರ ತನಿಖೆ ಸಮರ್ಪಕವಾಗಿ ನಡೆಯದೇ ಹೋದುದರಿಂದ ಪ್ರಕರಣದ ಆರೋಪಿತರು ರಾಜರೋಷವಾಗಿ ತಿರುಗುತ್ತಿರಲು ಕಾರಣವಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖಾಧಿಕಾರಿ ಮಾತನಾಡಿ ಪ್ರಕರಣದ ತನಿಖೆ ನಡೆಯುತ್ತಿದೆ ಅದರ ಕುರಿತು ಬಹಿರಂಗವಾಗಿ ಸಭೆಯಲ್ಲಿ ಪ್ರಸ್ತಾಪಿಸಲು ಅಸಾಧ್ಯವೆಂದರು. ಈ ಸಂದರ್ಭ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.