ಅಸ್ವಸ್ಥನನ್ನು ಆಸ್ಪತ್ರೆಗೆ ಸೇರಿಸಿದ ತಾ.ಪಂ.ಸದಸ್ಯ

Update: 2017-06-16 16:48 GMT

ಉಳ್ಳಾಲ,ಜು.16: ರಾ.ಹೆ 66ರ ಕೋಟೆಕಾರು ಅಡ್ಕದಲ್ಲಿ ರಸ್ತೆ ಮಧ್ಯದ ವಿಭಜಕದಲ್ಲಿ ಹಸಿವು, ಬಾಯಾರಿಕೆಯಿಂದ ದಣಿದು ಅಸ್ವಸ್ಥ ಗೊಂಡಿದ್ದ ಮೂಗ ವ್ಯಕ್ತಿಯೋರ್ವನನ್ನು ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಮತ್ತು ಸ್ನೇಹಿತರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿ ಉಪಚರಿಸಿದ್ದಾರೆ.

ಕೋಟೆಕಾರು ಅಡ್ಕದ ಹೆದ್ದಾರಿಯ ನಡುವಿನ ವಿಭಜಕದಲ್ಲಿ ಕಳೆದ ಮೂರು ದಿವಸಗಳಿಂದ ಅಪರಿಚಿತ ಮೂಗ ವ್ಯಕ್ತಿಯೋರ್ವರು ಅಸ್ವಸ್ಥರಾಗಿ ಮಳೆಗೆ ನೆನೆದು ಬಿದ್ದುಕೊಂಡಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ ಅಸ್ವಸ್ಥಗೊಂಡ ಅಪರಿಚಿತನನ್ನು ಸ್ಥಳೀಯ ಕಾರು ಚಾಲಕರಾದ ಸಂತೋಷ್ ಅವರು ಕಂಡಿದ್ದು ವ್ಯಕ್ತಿಯ ಬಗ್ಗೆ ಅನುಕಂಪ ತೋರಿಸಿ ಕಾಸು ತೆತ್ತು ಹೊಸತಾದ ಪ್ಲಾಸ್ಟಿಕನ್ನು ತಂದು ಅಸ್ವಸ್ಥಗೊಂಡ ವ್ಯಕ್ತಿಗೆ ಮಳೆಗೆ ನೆನೆಯದಂತೆ ಹೊದಿಸಿದ್ದಾರೆ.

ಸಂತೋಷ್ ಅವರು ತಕ್ಷಣ ಸ್ನೇಹಿತರಾದ ತಾ.ಪಂ ಸದಸ್ಯ ರವಿಶಂಕರ್ ಮತ್ತು ಮಾಜಿ ಗ್ರಾ.ಪಂ ಸದಸ್ಯ ಸಾರಥಿ ಅವರನ್ನು ಸ್ಥಳಕ್ಕೆ ಕರೆಯಿಸಿದ್ದು ರವಿಶಂಕರ್ ಮತ್ತು ಸ್ನೇಹಿತರು ಜತೆಗೂಡಿ ಅನಾಥನಿಗೆ ಉಪಹಾರ ,ನೀರು ನೀಡಿ ಉಪಚರಿಸಿದ್ದಾರೆ. ವ್ಯಕ್ತಿಗೆ ಮಾತು ಬಾರದಿರುವುದರಿಂದ ವಿಳಾಸ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ರವಿಶಂಕರ್ ಅವರು 108 ವಾಹನವನ್ನು ಸ್ಥಳಕ್ಕೆ ಕರೆಯಿಸಿ ವ್ಯಕ್ತಿಯನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ರವಾಣಿಸಿ ಸೂಕ್ತ ಚಿಕಿತ್ಸೆಗೆ ಏರ್ಪಾಡು ಮಾಡಿದ್ದು, ತಲಪಾಡಿ ತುಮಿನಾಡಿನ ಸ್ನೇಹಾಲಯ ಅನಾಥಾಶ್ರಮದ ಸಂಚಾಲಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೂ ಕರೆ ಮಾಡಿ ಅನಾಥ ವ್ಯಕ್ತಿಗೆ ಆಶ್ರಯ ನೀಡುವಂತೆ ಕೋರಿದ್ದಾರೆ.


       
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News