×
Ad

ಕಲ್ಲಡ್ಕ ಕೋಮು ಘರ್ಷಣೆ ಹಿನ್ನೆಲೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ

Update: 2017-06-16 22:16 IST

ಬಂಟ್ವಾಳ, ಜೂ. 16: ಕಲ್ಲಡ್ಕದಲ್ಲಿ ನಡೆದ ಕೋಮು ಘರ್ಷಣೆ ಹಿನ್ನೆಲೆಯಲ್ಲಿ ಕಲ್ಲಡ್ಕ ಸರಕಾರಿ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಜಗದೀಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಶಾಂತಿ ಸಭೆ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ ಉಭಯ ಕೋಮಿನ ಬಹುತೇಕ ಮುಖಂಡರು ಕಠಿಣ ಸೆಕ್ಷನ್ ಅಡಿಯಲ್ಲಿ ಅಮಾಯಕರನ್ನು ಬಂಧಿಸುತ್ತಿರುವ ಪೊಲೀಸ್ ಇಲಾಖೆಯ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಅಮಾಯಕರನ್ನು ಬಿಡುಗಡೆಗೊಳಿಸಿ ನೈಜ್ಯ ಆರೋಪಿಗಳನ್ನು ಮಾತ್ರ ಬಂಧಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಜಗದೀಶ್, ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಉತ್ತಮ ಹೆಸರಿದೆ. ಬೆರಳೆಣಿಕೆಷ್ಟು ಜನರಿಂದಾಗಿ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಎರಡೂ ಸಮುದಾಯದ ಹಿರಿಯರು ಯುವ ಜನರನ್ನು ಸರಿದಾರಿಗೆ ತರುವ ಕೆಲಸ ಮಾಡಿದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ. ಯಾವುದೇ ಅಹಿತಕರ ಘಟನೆಗಳಾದ ತಕ್ಷಣ ಎರಡೂ ಸಮುದಾಯದ ಮುಖಂಡರು ಅಥವಾ ಹಿರಿಯರು ಸೇರಿಕೊಂಡು ಪರಿಸ್ಥಿತಿ ಉಲ್ಬಣವಾಗದಂತೆ ಪ್ರಯತ್ನಿಸಬೇಕು. ಘಟನೆಗೆ ಮೂಲ ಕಾರಣಕರ್ತರಾದವರನ್ನು ಕೂಡಾ ಕಾನೂನಿನ ಕೈಗೆ ಒಪ್ಪಿಸಬೇಕು ಎಂದರು.

ತಾಳ್ಮೆ ಅಗತ್ಯ:

ಘಟನೆಗೆ ಸಂಬಂಧಿಸಿ ಉಭಯ ಕೋಮುಗಳಿಂದಲೂ ಅಮಾಯಕರನ್ನು ಬಂಧಿಸಲಾಗಿದೆ ಎಂದು ಸಭೆಯಿಂದ ಕೇಳಿ ಬಂದ ಬಹುತೇಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಘಟನೆ ನಡೆದ ಕೂಡಲೇ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುವುದು, ಗಡುವು ನೀಡುವುದರಿಂದ ಅಮಾಯಕ ಬಂಧನವಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ತನಿಖೆ ನಡೆಸಿ ನೈಜ್ಯ ಆರೋಪಿಗಳನ್ನು ಬಂಧಿಸುವವರೆ ತಾಳ್ಮೆ ವಹಿಸಬೇಕಾಗುತ್ತದೆ ಎಂದರು.

ಇದಕ್ಕೆ ಸಭೆ ಸಹಮತ ವ್ಯಕ್ತಪಡಿಸಿತು. ಇಲ್ಲಿ ಬಂದಿರುವ ಎಲ್ಲ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಜನರ ಆಗ್ರಹದಂತೆ ಕಲ್ಲಡ್ಕ ಪೊಲೀಸ್ ಹೊರ ಠಾಣೆಯನ್ನು ಬಸ್ ತಂಗುದಾಣದ ಮೇಲ್ಬಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಅನುದಾನ ಒದಗಿಸಲಾಗುವುದು ಎಂದ ಅವರು, ಒಟ್ಟಾರೆಯಾಗಿ ಕಲ್ಲಡ್ಕದಲ್ಲಿ ಶಾಂತಿ ಮರುಸ್ಥಾಪಿಸಲು ಇಲ್ಲಿನ ನಾಗರಿಕರು ಸಹಕರಿಸಬೇಕೆಂದು ಕೋರಿದರು.

ಗಾಂಜಾ ನಿರ್ಮೂಲನೆ:

ಹದಿಹರೆಯದ ಯುವಕರು ದುಷ್ಕೃತ್ಯಗಳಲ್ಲಿ ತೊಡಗಿರುವುದನ್ನು ಗಮನಿಸಿದ್ದೇನೆ. ಅವರಲ್ಲಿ ಬಹುತೇಕ ಗಾಂಜಾ ವ್ಯಸನಿಗಳಾಗಿದ್ದಾರೆ. ಕಲ್ಲಡ್ಕದಲ್ಲಿ 100 ಶೇಕಡ ಗಾಂಜಾ ನಿರ್ಮೂಲನೆ ಆಗಬೇಕು. ಆ ನಿಟ್ಟಿನಲ್ಲಿ ಗಾಂಜಾ ವ್ಯಸನಿಗಳ ಮೇಲೆ ಕಠಿಣ ಸೆಕ್ಷನ್‌ಗಳನ್ನು ಹಾಕಿ ಶಿಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಹೇಳಿದರು.

ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಗ್ರಾಮ ಪಂಚಾಯತ್ ಸದಸ್ಯೆ ಆಯಿಷಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಇನ್ನು ಮುಂದೆ ಯಾವುದೇ ಕಾರ್ಯಾಚರಣೆ ನಡೆಸುವಾಗ ವಿಡಿಯೋ ಚಿತ್ರೀಕರಣ ಮಾಡುವಂತೆ ಆದೇಶಿಸಲಾಗಿದೆ. ಅಂತಹ ಘಟನೆ ಕಂಡು ಬಂದರೆ ಪರಿಶೀಲಿಸಿ ಕ್ರಮ ಕೈ ಗೊಳ್ಳಲಾಗುವುದು ಎಂದ ಅವರು, ಕಲ್ಲಡ್ಕ ಬಂದ್ ವೇಳೆ ಪೊಲೀಸರು ಯಾವ ಅಂಗಡಿಯನ್ನೂ ಬಂದ್ ಮಾಡಿಸಿಲ್ಲ ಎಂದು ಹೇಳಿದ ಅವರು ಯಾರಿಗೆ ಸಾಧ್ಯವೋ ಅವರೆಲ್ಲ ಅಂಗಡಿಗಳ ಎದುರು ಸಿಸಿ ಕ್ಯಾಮರಾಗಳನ್ನು ಅಳವಡಿಸಿ. ಸಿಸಿ ಕೆಮರಾ ಅಳವಡಿಸಲು ಆರ್ಥಿಕ ಸಹಾಯ ಅಗತ್ಯ ಇದ್ದರೆ ನೀಡಲು ಪ್ರಯತ್ನಿಸಲಾಗುವುದು ಎಂದರು.

ಸಭೆಯಲ್ಲಿ ಕೆ.ಪದ್ಮನಾಭ ಕೊಟ್ಟಾರಿ, ಇದಿನಬ್ಬ, ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಪಂಚಾಯತ್ ಸದಸ್ಯ ಗೋಪಾಲ ಪೂಜಾರಿ, ಶರೀಫ್ ಮೊದಲಾದವರು ಸಲಹೆ ನೀಡಿದರು.

ಗ್ರಾಪಂ ಸದಸ್ಯ ಯೂಸುಫ್ ಕಲ್ಲಡ್ಕ, ಝಕರಿಯಾ ಕಲ್ಲಡ್ಕ ಸಹಿತ ಮೊದಲಾದವರು ಉಪಸ್ಥಿರಿದ್ದರು.

ಸ್ಕ್ರೀನ್ ಶಾರ್ಟ್ ಕೊಟ್ಟರೆ ಕಾನೂನು ಕ್ರಮ: ಎಸ್ಪಿ

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಸೃಷ್ಟಿಸುವುದು ಮತ್ತು ಅದನ್ನು ಬೇರೆಯವರಿಗೆ ರವಾನಿಸುವುದು ಕೂಡಾ ಕಾನೂನಿನಲ್ಲಿ ಅಪರಾಧವಾಗಿದೆ. ಇದಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ. ಯಾರಾದರು ಟೈಪ್‌ಮಾಡಿ ಕಳುಹಿಸಿದ ಅಥವಾ ಶೇರ್ ಮಾಡಿದ ಪ್ರಚೋದನಕಾರಿ ಸಂದೇಶದ ಸ್ಕ್ರೀನ್ ಶಾರ್ಟ್ ತೆಗೆದು ನನ್ನ ಮೊಬೈಲ್ (9480800941)ಗೆ ಕಳುಹಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಹೇಳಿದರು.

ಮೇ 26ರ ಘಟನೆಯ ಬಳಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸರು ಇಡೀ ಕಲ್ಲಡ್ಕದಲ್ಲಿ ಪೋಸ್ಟರ್ ಮತ್ತು ಫ್ಲೆಕ್ಸ್‌ಗಳನ್ನು ಹಾಕಿದ್ದಾರೆ. ಇದು ನಾಯಿ ಇದೆ ಎಚ್ಚರಿಕೆ ಎಂದು ಎಚ್ಚರಿಸಲು ಮನೆಯ ಮುಂದೆ ಬೋರ್ಡ್ ಹಾಕಿದಂತಿದೆ. ಸಿಸಿ ಕೆಮಾರಾಗಳಿದ್ದರೂ ಜೂ.13ರ ಘಟನೆಗೆ ಸಂಬಂಧಿಸಿ ಅಮಾಯಕರ ಬಂಧನವಾಗುವುದು ಹೇಗೆ? ಘಟನೆಗೆ ಸಂಬಂಧಿಸಿ ಎರಡೂ ಸಮುದಾಯದ ಅಮಾಯಕರನ್ನು ಬಂಧಿಸಿರುವ ಪೊಲೀಸರು ಅವರ ವಿರುದ್ಧ ಐಪಿಸಿ ಕಲಂ 307 ನಂಥಹ ಕಠಿಣ ಕಲಂನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಮಾಯಕರನ್ನು ಬಿಡುಗಡೆಗೊಳಿಸಿ ನೈಜ್ಯ ಆರೋಪಿಗಳನ್ನು ಮಾತ್ರ ಬಂಧಿಸಬೇಕು. - ಅಬೂಬಕ್ಕರ್ ಸಿದ್ದೀಕ್ ಪನಮ

ಉದ್ವೇಗ ಶಮನ ಮಾಡಲು ತಂಡ ರಚನೆಯಾಗಬೇಕು. ಅಮಾಯಕರನ್ನು ಬಂಧಿಸಿದಾಗ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಮತ್ತು ನೈಜ್ಯ ಆರೋಪಿಗಳನ್ನು ಬಂಧಿಸದಿದ್ದರೆ ಅವರಿಗೆ ಅಪರಾಧ ಎಸಗಳು ಅವಕಾಶ ನೀಡಿದಂತಾಗುತ್ತದೆ. - ಪದ್ಮನಾಭ ರೈ, ಎಪಿಎಂಸಿ ಅಧ್ಯಕ್ಷ

ಕಲ್ಲಡ್ಕ ಪರಿಸರದಲ್ಲಿ ಉಭಯ ಕೋಮಿನವರ ವಾಹನಗಳ ಮಧ್ಯೆ ಅಪಘಾತಗಳು ಸಂಭವಿಸಿದಾಗ ಕೆಲವು ಕಿಡಿಗೇಡಿಗಳು ಕೋಮು ಬಣ್ಣ ಹಚ್ಚಿ ಗಲಾಟೆ ಮಾಡುತ್ತಾರೆ. ಗಲಭೆಗೆ ಸಂಬಂಧಿಸಿ ಪೊಲೀಸರು ಅಪಘಾತದಿಂದ ಗಾಯಗೊಂಡವರನ್ನು ಸ್ವಯಂ ಸೇವಕರಾಗಿ ಆಸ್ಪತ್ರೆಗೆ ಸಾಗಿಸುವವರ ಮೇಲೆ ಕೇಸ್ ದಾಖಲಿಸುತ್ತಾರೆ. ಇದು ನಿಲ್ಲಬೇಕು. - ಶಾಫಿ ಕಲ್ಲಡ್ಕ

ಆರೋಪಿಗಳನ್ನು ಬಂಧಿಸುವ ನೆಪದಲ್ಲಿ ಪೊಲೀಸರು ರಾತ್ರೋ ರಾತ್ರಿ ಮನೆಗಳಿಗೆ ನುಗ್ಗಿ ಮಕ್ಕಳು, ಮಹಿಳೆಯರು ಎನ್ನದೆ ದೌರ್ಜನ್ಯ ಎಸಗುತ್ತಿದ್ದಾರೆ. ವೃದ್ಧರಿಗೆ ಮತ್ತು ರೋಗಿಗಳಿಗೆ ಹಿಂಸೆ ನೀಡುತ್ತಿದ್ದಾರೆ. ಈಗಾಗಲೇ ಪೊಲೀಸ್ ದೌರ್ಜನ್ಯದಿಂದ ಮಾನಸಿಕ ಹಿಂಸೆಗೆ ಒಳಗಾದ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಯಾಚರಣೆಯ ವೇಳೆ ಮಹಿಳಾ ಸಿಬ್ಬಂದಿಯೂ ಇರುವುದಿಲ್ಲ. - ಆಯಿಷಾ, ಗ್ರಾಪಂ ಸದಸ್ಯೆ

ಕಲ್ಲಡ್ಕದಲ್ಲಿ ಇದುವರೆಗೆ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿ ಯಾರಿಗೂ ಶಿಕ್ಷೆಯಾಗಿಲ್ಲ. ಗಲಭೆ ಸೃಷ್ಟಿಸುವವರನ್ನು ಬಂಧಿಸಿ ಶಿಕ್ಷೆಯಾಗುವಂತೆ ಮಾಡಿದಾಗ ಇಂತಹ ಘಟನೆಗಳು ಕಡಿಮೆಯಾಗುತ್ತದೆ. ಪ್ರಸ್ತುತ ಕಲ್ಲಡ್ಕದಲ್ಲಿರುವ ಹೊರ ಠಾಣೆಯನ್ನು ಕಲ್ಲಡ್ಕದ ಕೇಂದ್ರ ಸ್ಥಾನಕ್ಕೆ ಸ್ಥಳಾಂತರಿಸಬೇಕು. - ಹನೀಫ್ ಹಾಜಿ ಗೋಳ್ತಮಜಲು

ಸಿಸಿ ಕ್ಯಾಮೆರಾದಲ್ಲಿರುವವರು ಎಲ್ಲರೂ ತಪ್ಪಿತಸ್ಥರಲ್ಲ. ಆರೋಪಿಗಳನ್ನು ಗುರುತಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಯಾರೂ ಇಲ್ಲಿ ಅಶಾಂತಿಯನ್ನು ಬಯಸುವವರಿಲ್ಲ. ಶಾಂತಿ ಸಭೆಗಳು ಕಾಟಾಚಾರಕ್ಕೆ ನಡೆಯಬಾರದು. - ಎ.ರುಕ್ಮಯ ಪೂಜಾರಿ, ಮಾಜಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News