×
Ad

ಸಿಪಿಎಂ ಹಿರಿಯ ಸದಸ್ಯ ಈಶ್ವರ ಶಕ್ತಿನಗರ ನಿಧನ

Update: 2017-06-16 22:24 IST

ಮಂಗಳೂರು, ಜೂ. 16: ಸಿಪಿಎಂ ಪಕ್ಷದ ಹಿರಿಯ ಸದಸ್ಯ, ಮಂಗಳೂರು ನಗರ ಸಮಿತಿಯ ಮಾಜಿ ಸದಸ್ಯ ಎ.ಈಶ್ವರ ಶಕ್ತಿನಗರ (78) ಶುಕ್ರವಾರ ತಮ್ಮ ಶಕ್ತಿನಗರದಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.

ತಮ್ಮ ಯೌವನಾವಸ್ಥೆಯಲ್ಲಿ ಹೆಂಚು ಕಾರ್ಮಿಕನಾಗಿ ದುಡಿಯುದ ಸಂದರ್ಭದಲ್ಲಿ ಯೂನಿಯನ್ ಸದಸ್ಯರಾಗುವ ಮೂಲಕ ಹೆಂಚು ಕಾರ್ಮಿಕರ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ ಈಶ್ವರ ಅವರು ಅನೇಕ ಹೋರಾಟ, ಚಳುವಳಿಗಳಲ್ಲಿ ಭಾಗವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಗೇರು ಬೀಜ ಕಾರ್ಮಿಕರ ಸಂಘಟನೆಯು ಪ್ರಬಲವಾಗಿ ಬೆಳೆಯುವಲ್ಲಿ ಸಕ್ರಿಯಪಾತ್ರ ವಹಿಸಿದ್ದಾರೆ. ಕ್ರಮೇಣ ಹಂಚಿನ ಫ್ಯಾಕ್ಟರಿಯ ಸಮಿತಿಯಲ್ಲಿ ಮುಖಂಡರಾಗುವ ಮೂಲಕ ಹಂಚು ಕಾರ್ಮಿಕರ ಯೂನಿಯನ್‌ನಲ್ಲಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು.

1964ರಲ್ಲಿ ಪಕ್ಷ ಇಬ್ಬಾಗವಾದಾಗ ಹೆಂಚು ಕಾರ್ಮಿಕರ ಮಧ್ಯೆ ಸಿಪಿಎಂಗೆ ಭಾರೀ ಪ್ರಭಾವ ಇದ್ದುದರಿಂದ ಸಿಪಿಎಂನತ್ತ ಬಂದರು. ತನ್ನ ಬಾಲ್ಯ ಜೀವನದಲ್ಲಿ ಜಪ್ಪಿನಮೊಗರುವಿನಲ್ಲಿದ್ದ ಈಶ್ವರ್ 1973ರಲ್ಲಿ ಶಕ್ತಿನಗರಕ್ಕೆ ಬಂದು ನೆಲೆಸಿದರು. ನಂತರ ಶಕ್ತಿನಗರದಲ್ಲಿ ಪಕ್ಷದ ಸಂಘಟನೆಗೆ ಚಾಲನೆ ನೀಡಿ ಪಕ್ಷದ ಶಾಖೆಯನ್ನು ಪ್ರಾರಂಭಿಸಿದರು. ಆ ಶಾಖೆಯ ಕಾರ್ಯದರ್ಶಿಯಾಗಿದ್ದುಕೊಂಡು ಕ್ರಮೇಣ ಪಕ್ಷದ ನಗರ ಸಮಿತಿ ಸದಸ್ಯರಾದರು. ಪ್ರದೇಶದಲ್ಲಿ ಬೀಡಿ ಸಂಘಟನೆಗೆ ಭಾರೀ ಪ್ರಭಾವವಿದ್ದು, ಬೀಡಿ ಸಂಘಟನೆ ವಿಸ್ತಾರಕ್ಕೆ ಗಮನ ನೀಡಿದರು. ಪಕ್ಷದ ಪತ್ರಿಕೆ ಜನಶಕ್ತಿಯಲ್ಲೂ ಸಕ್ರಿಯ ಪಾತ್ರ ವಹಿಸಿದರು. ಇಂತಹ ಸಂಗಾತಿಯನ್ನು ಕಳೆದುಕೊಂಡಿರುವುದು ಕಮ್ಯೂನಿಸ್ಟ್ ಚಳವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಿಪಿಎಂ ತಿಳಿಸಿದೆ.

ಮೃತರ ಅಂತಿಮ ದರ್ಶನದಲ್ಲಿ ಸಿಪಿಎಂ ಮುಖಂಡರಾದ ಕೆ. ಆರ್. ಶ್ರೀಯಾನ್, ವಸಂತ ಆಚಾರಿ, ಜೆ. ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಯಾದವ ಶೆಟ್ಟಿ, ಯು ಬಿ. ಲೋಕಯ್ಯ, ಜಯಂತ ನಾಯ್ಕಿ, ರಮಣಿ ಮೂಡಬಿದ್ರಿ, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು ಪಕ್ಷದ ನಗರ ಸಮಿತಿ ಮುಖಂಡರಾದ ಸುರೇಶ್ ಬಜಾಲ್, ದಯಾನಂದ ಶೆಟ್ಟಿ, ಸಂತೋಷ್ ಶಕ್ತಿನಗರ, ಸಂತೋಷ್ ಬಜಾಲ್ ಮುಂತಾದವರು ಪಾಲ್ಗೊಂಡಿದ್ದರು.

ಅವರ ನಿಧನಕ್ಕೆ ಸಿಪಿಎಂ ಮಂಗಳೂರು ನಗರ ಸಮಿತಿ, ಡಿ.ವೈ.ಎಫ್.ಐ. ಮಂಗಳೂರು ನಗರ ಸಮಿತಿ, ಸ್ಥಳೀಯ ಶತ್ತಿನಗರದ ಸಿಪಿಎಂ, ಡಿ.ವೈ.ಎಫ್.ಐ., ಎಸ್.ಎಫ್.ಐ, ನಿವೇಶನರಹಿತರ ಹೋರಾಟ ಸಮಿತಿ ಹಾಗೂ ಜನಶಕ್ತಿ ಬಳಗ ಸೇರಿದಂತೆ ಅನೇಕ ಸಂಘಸಂಸ್ಥೆಗಳು ಅತೀವ ಶೋಕ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News