×
Ad

ಆರೋಪಿಯನ್ನು ಸೆರೆಹಿಡಿಯಲು ಹೋದ ಪೊಲೀಸರಿಗೆ ತಂಡದಿಂದ ಆಕ್ರಮಣ

Update: 2017-06-17 18:10 IST

ಮಂಜೇಶ್ವರ,ಜೂ.17: ದರೋಡೆ ಪ್ರಕರಣದ ಆರೋಪಿಯನ್ನು ಸೆರೆ ಹಿಡಿಯಲು ಮಫ್ತಿ ವೇಷದಲ್ಲಿ ತೆರಳಿದ ಪೊಲೀಸರು ಮರಳಿ ಬರುತ್ತಿದ್ದಾಗ ಕಾರುಗಳಲ್ಲಿ ತಲುಪಿದ ತಂಡವೊಂದು ತಡೆದು ನಿಲ್ಲಿಸಿ ಆಕ್ರಮಿಸಿದ ಘಟನೆ ನಡೆದಿದೆ.

ಶುಕ್ರವಾರ ಸಂಜೆ ಮಜೀರ್‌ಪಳ್ಳದಲ್ಲಿ ಘಟನೆ ನಡೆದಿದೆ. ತಂಡದ ಹಲ್ಲೆಯಿಂದ ಗಾಯಗೊಂಡ ಮಂಜೇಶ್ವರ ಎಸ್.ಐ. ಅನೂಪ್ ಕುಮಾರ್, ಪೊಲೀಸರಾದ ರತೀಶ್, ಪ್ರಮೋದ್, ಉಣ್ಣಿಕೃಷ್ಣನ್ ಎಂಬಿವರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದರು.

ತಿಂಗಳ ಹಿಂದೆ ಮುಟ್ಟಂಗೇಟ್ ನಿವಾಸಿ ಮಂಗಳೂರಿನಲ್ಲಿ ಬಾರ್ ಮಾಲಕರಾಗಿರುವ ಶ್ರೀಧರ ಶೆಟ್ಟಿ ಎಂಬವರ ಮನೆಗೆ ತಲುಪಿ ಕೋವಿ ತೋರಿಸಿ ಬೆದರಿಕೆಯೊಡ್ಡಿ ಹಣಕ್ಕಾಗಿ ಬೇಡಿಕೆ ಮುಂದಿರಿಸಿದ ಪ್ರಕರಣದಲ್ಲಿ ಆರೋಪಿಯಾದ ಕುರುಡಪದವು ನಿವಾಸಿ ಅಲಿ ಎಂಬಾತನನ್ನು ಬಂಧಿಸಲೆಂದು ಮಂಜೇಶ್ವರ ಎಸ್.ಐ. ಅನೂಪ್ ಕುಮಾರ್ ಹಾಗೂ ಪೊಲೀಸರು ಶುಕ್ರವಾರ ಸಂಜೆ ಮಫ್ತಿ ವೇಷದಲ್ಲಿ ತೆರಳಿದ್ದರು.

ಆದರೆ ಆರೋಪಿಯನ್ನು ಸೆರೆ ಹಿಡಿಯಲಾಗಲಿಲ್ಲ. ಇದರಿಂದ ಮರಳುತ್ತಿದ್ದಾಗ ಪೊಲೀಸರ ವಾಹವನ್ನು ಓಮ್ನಿ ವ್ಯಾನ್ ಹಾಗೂ ಕಾರಿನಲ್ಲಿ ತಂಡವೊಂದು ಹಿಂಬಾಲಿಸಿದ್ದು, ಮಜೀರ್‌ಪಳ್ಳಕ್ಕೆ ತಲುಪಿದಾಗ ಪೊಲೀಸರ ವಾಹನಕ್ಕೆ ತಡೆಯೊಡ್ಡಲಾಗಿದೆ. ಬಳಿಕ ಪೊಲೀಸರ ಮೇಲೆ ಆಕ್ರಮಣಕ್ಕೆ ತಂಡ ಮುಂದಾಗಿದ್ದು ಈ ವೇಳೆ ಮಫ್ತಿಯಲ್ಲಿದ್ದ ಪೊಲೀಸರು ನಾವು ಪೊಲೀಸರೆಂದು ತಿಳಿಸಿ ಗುರುತು ಚೀಟಿ ತೋರಿಸಿದರೂ ತಂಡ ಆಕ್ರಮಣ ನಡೆಸಿದೆ.

ತಂಡದಲ್ಲಿ ಸುಮಾರು 25 ಮಂದಿಯಿದ್ದು ಈ ಪೈಕಿ ಇಬ್ಬರನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.ಆನೆಕಲ್ಲು ನಿವಾಸಿಗಳಾದ ಅಬ್ದುಲ್ ಮಜೀದ್ (36) ಹಾಗೂ ಆಹ್ಮದ್ ಬಾತಿಷ್ (23) ಬಂಧಿತ ಆರೋಪಿಗಳಾಗಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಆರೋಪಿ ಕುರುಡಪದವು ಅಲಿಯ ಬೆಂಬಲಿಗರಾದ ತಂಡವೇ ತಮಗೆ ಆಕ್ರಮಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ. ತಿಂಗಳ ಹಿಂದೆ ಖಾಲಿಯಾ ರಫೀಕ್, ಕುರುಡಪದವು ಅಲಿ ಸಹಿತ ನಾಲ್ಕು ಮಂದಿ ತಂಡ ಮುಟ್ಟಂಗೇಟ್‌ನ ಶ್ರೀಧರ ಶೆಟ್ಟಿಯವರ ಮನೆಗೆ ತೆರಳಿ ಒಂದೂವರೆ ಕೋಟಿ ರೂ. ನೀಡುವಂತೆ ಬೇಡಿಕೆಯೊಡ್ಡಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದರೂ ಆರೋಪಿಗಳನ್ನು ಪತ್ತೆ ಹಚ್ಚಲಾಗಲಿಲ್ಲ. ಈ ಮಧ್ಯೆ ಕುರುಡಪದವು ಅಲಿ ಶುಕ್ರವಾರ ಆತನ ಮನೆಗೆ ತಲುಪಿರುವುದಾಗಿ ಮಾಹಿತಿ ಲಭಿಸಿದ್ದು ಈ ಬಗ್ಗೆ ಕುಂಬಳೆ ಸಿ.ಐ. ನೀಡಿದ ಆದೇಶದಂತೆ ಮಂಜೇಶ್ವರ ಎಸ್.ಐ. ನೇತೃತ್ವದ ಪೊಲೀಸರು ಆತನ ಸೆರೆಗಾಗಿ ಕಾರ್ಯಾಚರಣೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News