ಪಾಳು ಬಾವಿಗೆ ಬಿದ್ದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವಕನ ರಕ್ಷಣೆ
ಮಂಜೇಶ್ವರ,ಜೂ.17: ದಿನಗಳ ಹಿಂದೆ ಪಾಳುಬಾವಿಗೆ ಬಿದ್ದು ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವಕನನ್ನು ನಾಗರಿಕರು ಮೇಲಕ್ಕೆತ್ತಿ ಜೀವಾಪಾಯದಿಂದ ಪಾರುಮಾಡಿದ್ದಾರೆ.
ಉಪ್ಪಳಗೇಟ್ ಬಳಿಯಲ್ಲಿರುವ ಪಾಳು ಬಾವಿಯಲ್ಲಿ ಸುಮಾರು 30 ವರ್ಷದ ಅನ್ಯರಾಜ್ಯ ಕಾರ್ಮಿಕನಾದ ಯುವಕ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದ್ದಾರೆ. ತ್ಯಾಜ್ಯಗಳು ಬಹುತೇಕ ತುಂಬಿಕೊಂಡಿರುವ ಬಾವಿಯಲ್ಲಿ ಬಿದ್ದಿದ್ದ ಇವರ ನರಳಾಟ ಕೇಳಿ ರೈಲು ಹಳಿಯ ದುರಸ್ತಿ ಕೆಲಸ ನಡೆಸುತ್ತಿದ್ದ ಯುವಕರು ಸ್ಥಳಕ್ಕೆ ತೆರಳಿ ನೋಡಿದಾಗ ಯುವಕ ಕಂಡುಬಂದಿದ್ದಾರೆ.
ಕೂಡಲೇ ಪರಿಸರ ನಿವಾಸಿಗಳಾದ ಯುವಕರು ತಲುಪಿ ಬಾವಿಯೊಳಗಿನಿಂದ ಮೇಲಕ್ಕೆತ್ತಿ ಉಪ್ಪಳದ ಖಾಸಗಿ ಆಸ್ಪತ್ರೆಗೂ ಬಳಿಕ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ತಲುಪಿಸಿ ದಾಖಲಿಸಿದರು. ಬಾವಿಗೆ ಬಿದ್ದ ಯುವಕ ಅನ್ಯರಾಜ್ಯ ಕಾರ್ಮಿಕನೆಂದು ಖಚಿತಪಡಿಸಲಾಗಿದ್ದು, ಪ್ರಜ್ಞೆ ಮರುಕಳಿಸಿದ ಬಳಿಕ ಆತನ ಪೂರ್ಣ ಮಾಹಿತಿ ಹಾಗೂ ಬಾವಿಗೆ ಹೇಗೆ ಬಿದ್ದರೆಂಬುದನ್ನು ತಿಳಿಯಬಹುದಾಗಿದೆ. ಕಳೆದ ಮೂರು ದಿನಗಳಿಂದ ಈತ ಬಾವಿಯಲ್ಲಿದ್ದಿರಬಹುದೆಂದು ಸಂಶಯಿಸಲಾಗಿದೆ.