ರೈ ಎಸ್ಟೇಟ್ ಜನಸೇವಾ ಕೇಂದ್ರ ಉದ್ಘಾಟನೆ

Update: 2017-06-17 13:10 GMT

ಪುತ್ತೂರು, ಜೂ.17: ಸಮಾಜದ ಬಡವರ್ಗಕ್ಕೆ ಸಂಸ್ಕಾರಭರಿತ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗುವ ಕಾರ್ಯ ಜಗತ್ತಿನ ಅತ್ಯಂತ ಶ್ರೇಷ್ಠವಾದ ಕೆಲಸವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬದುಕುವ ‘ಹಕ್ಕು’ ನೀಡುವ ಪ್ರಯತ್ನವನ್ನು ಪುತ್ತೂರಿನ ಜನಸೇವಾ ಕೇಂದ್ರ ಮಾಡುವ ಮೂಲಕ ದೀನದಯಾಳ್ ಉಪಾದ್ಯರ ’ಅಂತ್ಯೋದಯ’ದ ಪರಿಕಲ್ಪನೆಯನ್ನು ಅಶೋಕ್ ಕುಮಾರ್ ರೈ ಇಲ್ಲಿ ಪ್ರತಿ ಸೃಷ್ಟಿ ಮಾಡಿದ್ದಾರೆ. ಜಿಲ್ಲೆಗೆ ಇದೊಂದು ಮಾದರಿ ಟ್ರಸ್ಟ್ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಆರಂಭಿಸಲಾದ ಜನಸೇವಾ ಕೇಂದ್ರವನ್ನು ಶನಿವಾರ ದರ್ಬೆ ಆರ್.ಇ.ಬಿ.ಎನ್.ಕ್ಲೇವ್ ಕಟ್ಟಡದಲ್ಲಿ ಉದ್ಘಾಟಸಿ ಮಾತನಾಡಿದರು.

 ಸರಕಾರದ ಯೋಜನೆಗಳನ್ನು ಸಾಮಾನ್ಯ ಜನತೆಯ ಮನೆ ಬಾಗಿಲಿಗೆ ಒಯ್ಯುವ ಕೆಲಸವನ್ನು ಸಮರ್ಪಕವಾಗಿ ಮಾಡುವ ಮೂಲಕ ಸರಕಾರಗಳ ಕಣ್ಣು ತೆರೆಸುವ ಕಾಯಕವನ್ನು ಟ್ರಸ್ಟ್ ಮಾಡಿದೆ. ಉದ್ಯಮದಲ್ಲಿ ಗಳಿಸಿದ ಆದಾಯವನ್ನು ಸಮಾಜಕ್ಕೆ ಮತ್ತೆ ನೀಡುವ ಕೆಲಸ ಮಾಡಲು ಹೃದಯ ಶ್ರೀಮಂತಿಕೆ ಇರಬೇಕು. ಬಡ ಜನತೆಯ ಕಣ್ಣೀರು ಒರೆಸುವ ಕೈಕಂಕರ್ಯ ಮಾಡುವ ಟ್ರಸ್ಟ್ ಭವಿಷ್ಯದ ಕತ್ತಲನ್ನು ಬೆಳಕು ಮಾಡುವ ಕೆಲಸಕ್ಕೆ ಮುಂದಾಗಿರುವುದು ಶ್ರೇಷ್ಠ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರಕುಮಾರ್ ಮಾತನಾಡಿ, ಸಾಮಾಜಿಕ ಚಿಂತನೆ ವ್ಯಕ್ತಿಯನ್ನು ಉನ್ನತಿಗೆ ಏರಿಸುತ್ತದೆ. ತಾನು ಬೆಳೆಯುವ ಮೂಲಕ ಸಮಾಜದ ಇತರರನ್ನು ಬೆಳೆಸುವ ಮನಸ್ಸು ಎಲ್ಲರಲ್ಲಿಯೂ ಇರುವುದಿಲ್ಲ. ಇಂತಹ ಉತ್ತಮ ಮನಸ್ಸು ಹೊಂದಿರುವ ಅಶೋಕ್ ಕುಮಾರ್ ರೈಯವರ ಎಲ್ಲಾ ಕೆಲಸಗಳಿಗೂ ತಾನು ಬೆನ್ನೆಲುಬಾಗಿ ನಿಲ್ಲುವುದಾಗಿ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಚಾಲನಾ ತರಬೇತಿಯ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾಯಕವನ್ನು ಜೊತೆಯಾಗಿ ನಡೆಸುವ ಮೂಲಕ ಸಮಾಜದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲು ಉತ್ತಮ ವೇದಿಕೆಯನ್ನು ಟ್ರಸ್ಟ್ ಹಾಕಿದೆ ಎಂದರು.

ಜನಸೇವಾ ಕೇಂದ್ರದ ಕಚೇರಿಯನ್ನು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ರೈ ಮಾತನಾಡಿ, ಕಳೆದ 5 ವರ್ಷಗಳ ಹಿಂದೆ ಪ್ರಾರಂಭಗೊಂಡ ಟ್ರಸ್ಟ್ ಮೂಲಕ ಹಲವಾರು ಜನಪರ ಯೋಜನೆಗಳನ್ನು ಮಾಡಲಾಗಿದೆ. ಆ ಮೂಲಕ ರೂ. 3 ಕೋಟಿ ಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಡಜನತೆಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದರು.

ಕಳೆದ ದೀಪಾವಳಿಯಂದು 8 ಸಾವಿರ ಮಂದಿಗೆ ವಸ್ತ್ರದಾನ, ಮಂಗಳೂರಿನ ಆಶ್ರಮದಲ್ಲಿರುವ 54 ಮಂದಿ ಏಡ್ಸ್ ಪೀಡಿತ ಮಕ್ಕಳ ಖರ್ಚು ವೆಚ್ಚ ಭರಿಸುತ್ತಿರುವುದು, ಅವಿವಾಹಿತ ಹೆಣ್ಣು ಮಕ್ಕಳ ಮದುವೆಗೆ, ಹೃದ್ರೋಗ, ಕಿಡ್ನಿ ವೈಫಲ್ಯಕ್ಕೊಳಗಾದ ಮಂದಿಗೆ ಧನ ಸಹಾಯ, 10 ಮಂದಿ ಬಡವರಿಗೆ ಕನಿಷ್ಠ ಬದುಕುವ ವ್ಯವಸ್ಥೆಯ ಸೂರು ಒದಗಿಸಲಾಗಿದೆ. ಪ್ರಸ್ತುತ 12 ಮನೆಗಳ ಕೆಲಸ ನಡೆಯುತ್ತಿದೆ. ಸಣ್ಣ ರೈತರಿಗೆ ಕೃಷಿ ನಡೆಸಲು ಅನುಕೂಲವಾಗುವಂತೆ ನೆಲಸಮತಟ್ಟು ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಸುಮಾರು 5 ಎಕರೆ ಜಾಗ ಖರೀದಿಸಿ ನಿವೇಶನ ರಹಿತರಿಗೆ ತಲಾ 4 ಸೆಂಟ್ಸ್‌ನ ಸೂರು ಕಲ್ಪಿಸುವ ಇರಾದೆ ಟ್ರಸ್ಟ್ ನ ಮುಂದೆ ಇದೆ ಎಂದರು.

ಪ್ರಸ್ತುತ ವರ್ಷ 6 ಮಂದಿಗೆ ಸೂರು ಒದಗಿಸಲಾಗಿದೆ. 225 ಮಂದಿಗೆ ತಲಾ ರೂ.6750 ಖರ್ಚು ವ್ಯವಸ್ಥೆಯ ವಾಹನ ಚಾಲನಾ ತರಬೇತಿ, ಬಿಪಿಎಲ್ ಕುಟುಂಬದ 1200 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಬಸ್ಸು ಪಾಸ್ ನೀಡಿಕೆ, 200 ಮಂದಿಗೆ ಉಚಿತ ಹೊಲಿಗೆ ತರಬೇತಿ ಹಾಗೂ ಹೊಲಿಗೆ ಯಂತ್ರ ವಿತರಣೆ, ಒಂದು ಸಾವಿರ ಮಂದಿ ಕಟ್ಟಡ ಕಾರ್ಮಿಕರ ಉಚಿತ ನೋಂದಣಿ, ಉಚಿತ ಪಾನ್‌ಕಾರ್ಡ್, ಆಧಾರ್ ಕಾರ್ಡ್ ಸಹಿತ ಸರಕಾರಿ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಯತ್ನ ಮಾಡಲಾಗಿದ್ದು, ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಯಂತ್ರೋಪಕರಣ ಹಾಗೂ ಲಾರಿಗಳನ್ನು ಖರೀದಿಸಿ ಬಡ ರೈತರ ಕೃಷಿ ಚಟುವಟಿಕೆಗೆ ನೆರವಾಗುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಅಶೋಕ್ ಕುಮಾರ್ ರೈ ತಿಳಿಸಿದರು. 

ಕಾರ್ಯಕ್ರಮದಲ್ಲಿ ಟ್ರಸ್ಟನ ವ್ಯವಸ್ಥಾಪಕ ಆದರ್ಶ ರೈ ಉಪ್ಪಿನಂಗಡಿ ಸ್ವಾಗತಿಸಿದರು. ಲಿಂಗಪ್ಪ ಕೆ. ವಂದಿಸಿದರು. ನಗರಸಭಾ ಸದಸ್ಯ ರಾಜೇಶ್ ಬನ್ನೂರು ಮತ್ತು ಉಪನ್ಯಾಸಕಿ ಹರಿಣಿ ಪುತ್ತೂರಾಯ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News