ಉಡುಪಿಯಲ್ಲಿ ಹೈಅಲರ್ಟ್: ರಥಬೀದಿ ಸಂಪೂರ್ಣ ಬಂದ್‌

Update: 2017-06-17 14:05 GMT

ಉಡುಪಿ, ಜೂ.17: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವಿವಾರ ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಇಂದು ಬೆಳಗ್ಗೆಯಿಂದ ರಥಬೀದಿಯ ಎಲ್ಲ ಅಂಗಡಿಗಳನ್ನು ಸಂಪೂರ್ಣ ಮುಚ್ಚಲಾಗಿತ್ತು.

ರಾಷ್ಟ್ರಪತಿ ಬಂದು ಇಳಿಯಲಿರುವ ಆದಿ ಉಡುಪಿ ಹೆಲಿಪ್ಯಾಡ್, ಉಡುಪಿ ನಗರ ಮತ್ತು ಉಡುಪಿ ಶ್ರೀಕೃಷ್ಣ ಮಠದ ಆವರಣದಲ್ಲಿ ಸುಮಾರು 1200 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಮಠದ ಆವರಣದಲ್ಲಿ ಹೆಚ್ಚಿನ ಭದ್ರತೆ ಒದಗಿಸುವ ಉದ್ದೇಶದಿಂದ ಉಡುಪಿ ಜಿಲ್ಲಾಧಿಕಾರಿಗಳು ನೀಡಿದ ಆದೇಶದಂತೆ ರಥಬೀದಿಯಲ್ಲಿರುವ ಎಟಿಎಂಗಳು ಹೊರತು ಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ.ಇವುಗಳನ್ನು ನಾಳೆ ಮಧ್ಯಾಹ್ನ 3ಗಂಟೆಯ ನಂತರ ತೆರೆಯುವಂತೆ ಸೂಚಿಸಲಾಗಿದೆ.

ರಾಜಾಂಗಣ, ಮಠದ ಆಸುಪಾಸು ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದ್ದು, ಇಂದು ಬೆಳಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ನೇತೃತ್ವದಲ್ಲಿ ಭದ್ರತೆಯ ಪರಿಶೀಲನೆ ನಡೆಸಲಾಯಿತು. ಅಲ್ಲಿಂದ ಮಠದ ರಾಜಾಂಗಣದವರೆಗೆ ವಿಐಪಿ ವಾಹನ, ಅಂಬ್ಯುಲೆನ್ಸ್, ಅಗ್ನಿಶಾಮಕದಳದ ವಾಹನ ಸಹಿತ ಒಟ್ಟು 28 ವಾಹನಗಳಲ್ಲಿ ಪೂರ್ವಾಭ್ಯಾಸ ಮಾಡಲಾಯಿತು. ಮಧ್ಯಾಹ್ನ ವೇಳೆ ಎಸ್ಪಿ ಹಾಗೂ ಇತರ ಅಧಿಕಾರಿಗಳು ಮಠದ ಆವರಣ ಹಾಗೂ ರಾಜಾಂಗಣದ ಭದ್ರತೆಯನ್ನು ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News