ಮಾನವ ಗುರಾಣಿ ಬಳಕೆ ಸೇನೆಯ ಕಾರ್ಯನಿರ್ವಹಣಾ ವಿಧಾನವಲ್ಲ: ರಾವತ್

Update: 2017-06-17 14:14 GMT

ಹೈದರಾಬಾದ್, ಜೂ.17: ಕಾಶ್ಮೀರದಲ್ಲಿ ಇದೀಗ ತಲೆದೋರಿರುವ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಭದ್ರತಾ ಪಡೆಗಳು ಮಾನವ ಗುರಾಣಿಯನ್ನು ಬಳಸುವುದು ಒಂದು ಸಾಮಾನ್ಯ ಕಾರ್ಯನಿರ್ವಹಣಾ ವಿಧಾನ ಎಂದು ಪರಿಗಣಿಸುವಂತಿಲ್ಲ ಎಂದು ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

 ಮೇಜರ್ ಲೀಟಲ್ ಗೊಗೋಯ್ ಅವರು ಕಾಶ್ಮೀರದಲ್ಲಿ ಪ್ರತಿಭಟನಾ ನಿರತರನ್ನು ಚದುರಿಸಲು ವ್ಯಕ್ತಿಯೋರ್ವನನ್ನು ಮಾನವ ಗುರಾಣಿಯನ್ನಾಗಿ ಬಳಸಿರುವುದನ್ನು ರಾವತ್ ಈ ಹಿಂದೆ ಸಮರ್ಥಿಸಿದ್ದರು. ಈ ಹಿನ್ನೆಲೆಯಲ್ಲಿ ಮಾನವ ಗುರಾಣಿಯ ಬಳಕೆಯನ್ನು ಸಾಮಾನ್ಯ ಕಾರ್ಯನಿರ್ವಹಣಾ ವಿಧಾನ ಎಂದು ಪರಿಗಣಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಭಾರತೀಯ ಸೇನಾಪಡೆಗಳು ಮಾನವ ಹಕ್ಕುಗಳ ಕುರಿತಂತೆ ಸೂಕ್ಷ್ಮಸಂವೇದನೆಯ ಭಾವನೆಯನ್ನು ಹೊಂದಿವೆ. ಕಾಶ್ಮೀರದ ಪರಿಸ್ಥಿತಿಯನ್ನು ಸಹಜತೆಗೆ ತರಲು ಭದ್ರತಾ ಪಡೆಗಳು ಹಗಲಿರುಳು ಶ್ರಮಿಸುತ್ತಿವೆ ಎಂದ ಅವರು, ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡುತ್ತಿಲ್ಲ ಎಂದವರು ನುಡಿದರು.

    ಜಮ್ಮು ಕಾಶ್ಮೀರದಲ್ಲಿ ಕೆಲವು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದ್ದು ಇದು ಸಮಸ್ಯೆಗೆ ಕಾರಣವಾಗಿದೆ. ಯುವಜನತೆ ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಈ ಸುಳ್ಳು ಸುದ್ದಿಗಳೇ ಕಾರಣ. ಆದರೆ ತಾವು ತಪ್ಪು ದಾರಿಯಲ್ಲಿ ಸಾಗುತ್ತಿದ್ದೇವೆ ಎಂಬ ಅರಿವು ಶೀಘ್ರ ಇವರಲ್ಲಿ ಮೂಡುವುದೆಂದು ಆಶಿಸುತ್ತೇನೆ ಎಂದವರು ನುಡಿದರು.

ತೆಲಂಗಾಣದ ದುಂಡಿಗಲ್‌ನಲ್ಲಿರುವ ವಾಯುಪಡೆ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿವಿಧ ‘ಫ್ಲೈಟ್ ಕ್ಯಾಡೆಟ್’ಗಳ ತರಬೇತಿ ಮುಕ್ತಾಯ ಪರೇಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಸಂವಾದ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News